Tuesday, April 2, 2013

ಸಂಜೆ ಮಬ್ಬಿನಲಿ

ಸಂಜೆ ಮಬ್ಬಿನಲಿ
---------------
ಬದುಕಿನ ಹಂದರವ ನಿರ್ಮಿಸುತ್ತಲೇ
ಪರಕೀಯನಾಗಿಯೇ ಕರಗಿದ
ನನ್ನೀ ಬದುಕು.....
ನೆನಪುಗಳು ಸಾಯುವುದಿಲ್ಲ
ಭೂತಕಾಲದ ಘೋರಿ ಸೇರಿದ್ದರೂ
ಕುಳಿತುಕೊಂಡೇ ಇರುತ್ತವೆ
ಭೂತ ಪದರಿನಲಿ ಬೆಚ್ಚಗೆ

ಸಂಜೆ ಮಬ್ಬಿನಲಿ ಈಗ
ಹಿನ್ನೆಲೆಯ ಅಲೆಗಳು
ಮತ್ತೆ ಮತ್ತೆ ಹುಟ್ಟಿ ಅಳಿಯುತ್ತಾ
ಬಣ್ಣಗಳು ಕರಗಿ
ಸುಕ್ಕು ಮೂಡುವ ಕಾಲ!
ಸಾವಿನ ಹೊಸ್ತಿಲಲಿ
ಕೂತಿರುವ ನನಗೋ
ನಿರಂತರ ಪಯಣಕ್ಕಾಗಿ ತೆರೆದ
ಕೊನೆಯಿರದ ಇನ್ನಷ್ಟು ದಾರಿಗಳು

ಬದುಕಿನ ಮೆಟ್ಟಿಲಿನಲ್ಲಿ ಕುಳಿತು
ಎಣಿಸುತ್ತಿರುವೆ ಕಳೆದ ದಿನಗಳ
ಹಿಂದೆಲ್ಲಾ ಅದೆಂಥ ಕಾಲ!
ಪ್ರತಿ ವರ್ಷದ ಬೆಚ್ಚನೆಯ ಚಳಿಗಾಲ
ತುಂಬುವಸಂತದ ಹೊಂಗನಸು
ಗಾಳಿ ತುಂಬ ಹಕ್ಕಿಗಳ ಇಂಚರ
ಹಿತವಾದ ಸಂಜೆಗಳು!

ಎಲ್ಲಿ ಹೋಯಿತೋ?
ಕಾಲರಾಯ ಕಸಿದುಕೊಂಡ
ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ
ಈಗೇನುಳಿದಿದೆ...?
ಬರೀ , ಆ ನೆನಪಿನ ಪಳೆಯುಳಿಕೆ
ನಿತ್ಯ ಶಾಶ್ವತ!
ಹಂದರದ ತುಂಬ ತುಕ್ಕು ಹಿಡಿದ ಸರಪಳಿಗಳು
ಆಷಾಢದ ಗಾಳಿಯ ನಡುವೆ
ನಿಸರ್ಗದ ಕಣ್ಣು ಮುಚ್ಚಾಲೆ
ಹಸಿದ ಹೆಬ್ಬುಲಿಯಂತೆ
ವೈಶಾಖದ ರಣ ಬಿಸಿಲು
ಒಣಗಿ ಬತ್ತಿಹೋದ ಕಂಗಳಲ್ಲೀಗ
ಯಾವ ಸೂರ್ಯನೂ ಇಲ್ಲ!

ಬಿರುಕಡಲು

ಬಿರುಕಡಲು
----------
ದುಂಬಿ ಕುಳಿತ ಹೂದಳದ ಪುಳಕ
ಮೆಲುಗಾಳಿಗೆ ಮೆಲ್ಲನೆ ಅಲಗುವ
ಜುಳು ಜುಳು ಹರಿವ ನದಿಯ
ಅಲೆಗಳ ಹಾಗೆ ನವಿರು ಕಂಪನ
ನೀಲಿ ಬಾನಲ್ಲಿ ರೆಕ್ಕೆಬಿಚ್ಚಿ
ಹಾರುವ ಮನಸು
ಹಿಮಾಲಯ ಪರ್ವತದ
ತುದಿಯ ಮಂಜು ಕರಗಿ
ಬಿಳಿ ಹೊಗೆಯಾಗಿ
ಸುತ್ತೆಲ್ಲಾ ಹರಡುವಂತೆ ಹರುಷ!

ಧೋ ಧೋ ಹೊಯ್ಯುವ
ಬಿರುಮಳೆಗೆ
ತುಂಬಿ ಹರಿವ ಹೊಳೆ
ಯಾವುದು ಒಳಗೆ ?
ಯಾವುದು ಹೊರಗೆ ?
ನಿಲ್ಲದ ಕೊರಗು ಕೊನೆತನಕ

ಬೀಸಿ ಬರುವ ಬಿರುಗಾಳಿಗೊಡ್ಡಿದ
ದೀಪದ ಹಾಗೆ ಹೊಯ್ದಾಡುವ ಮನ
ಹುಟ್ಟಿನಲ್ಲಿ ಮುಲುಕಾಡುವ ರಾಗಗಳು
ಬಿರಿಯಲಾರದ ಮೊಗ್ಗುಗಳಂತೆ
ನೋವು ಮಿಡಿಯುವ ಎದೆಗೆ
ನಿರ್ಲಿಪ್ತತೆಯ ಸೆರಗು ಹೊದಿಸಿ
ನಿಶ್ಚಲವಾಗಿ ಬಿದ್ದಿರುವ ಮರಳುದಂಡೆಯನ್ನು
ಮೀರದ ಬಿರುಕಡಲು ನಾನು

ಹೂವಿಗೂ ನೋವಿದೆ

Sunday, January 20, 2013

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದು
ಮುಖ ಕಂಡು ಕುಣಿದೆಡೆಗೆ
ಹುಣ್ಣಿಮೆ ಚಂದ್ರ ಕಂಡ ಸಾಗರದಂತೆ
ಮೈ ಉಬ್ಬಿ ಕುಲುಕುತ್ತಾ ಬಂದವಳೇ
ಈಗ ಎಲ್ಲಿ---?

ಪಶ್ಚಿಮದ ಕಡಲು
ಎತ್ತರಿಸಿ ಬಂಡೆಗಪ್ಪಳಿಸುವಂತೆ
ನಿನ್ನ ಕಣ್ಣು ಕುಂಚವಾಡಿಸಿ
ನನ್ನೆದೆಯ ಮಡಿಲಲ್ಲಿ
ಬೆಳೆದ ಒಲುಮೆಯ ಚಿತ್ರ
ಹಚ್ಚ ಹಸಿರಾಗಿ ಬೆಳೆದಿರುವಾಗ
ಎಲ್ಲಿ ಹೋದೆ
ನನ್ನೆದೆಯ ಬತ್ತಿಸಿ,,,?

ಭೂಮಿಯ ಉತ್ಖಸಿಸಿ
ಹೊರ ತಂದ ಎಣ್ಣೆಯಂತೆ
ಎತ್ತಿತಂದ ಮುತ್ತು ಮಾಣಿಕ್ಯದಿಂದ
ನಿನ್ನ ಸಿಂಗರಿಸಿ
ಬದುಕು ದೋಣಿಯೇರಿ
ದೂರ ಹೋಗುವ ಮುನ್ನ
ಹೃದಯ ತೆರೆದು ಕರಗಿಹೋದೆ
ಮುಂಜಾವಿನ ಮಧುರ ನೀನಾದವಾದೆ.

Wednesday, December 26, 2012

ಕ್ಷಮಯಾ ಧರಿತ್ರಿ


ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

Tuesday, December 18, 2012

ಜನಾದೇಶ ಒಳ್ಳೇದು

ದೇಶದ ತುಂಬಾ ಭ್ರಷ್ಟಾಚಾರ ತಲೆ ಎತ್ತಿದೆ. ಎಲ್ಲಾ ಕಡೆ ಭ್ರಷ್ಟರೇ ತುಂಬಿದ್ದಾರೆ. ಇಂತವರಿಂದ ರಾಜಕೀಯ ಸುಧಾರಣೆ ಹೇಗೆ ಸಾಧ್ಯ? ಎಲ್ಲಾ ಸ್ವಾರ್ಥಿಗಳೇ! ದೇಶದ ಬಗ್ಗೆ , ನಾಡಿನ ಜನರ ಬಗ್ಗೆ ಕಾಳಜಿ ವಹಿಸುವವರು ಯಾರು? ಜನಾದೇಶ ಇದ್ದರೆ ಒಳ್ಳೆಯದು. ಆಗಲಾದರೂ ಜನರಿಗೆ ಒಳ್ಳೆದಾಗಬಹುದು. ನಿಮ್ಮ ಅಭಿಪ್ರಾಯ ಏನು?

ಕನ್ನಡಸಿನಿಮಾದ " ಡಬ್ಬಿಂಗ್ ಸಂಸ್ಕತಿ"

ಇತ್ತೀಚೆಗೆ ಬಹಳ ಚರ್ಚಿತ ವಿಷಯ ಎಂತದು ಅಂದ್ರೆ ಕನ್ನಡ ಸಿನಿಮಾದ"ಡಬ್ಬಿಂಗ್ ಸಂಸ್ಕೃತಿ".ಯಾಕಾಗಿ ಹೋರಾಟ ಮಾಡ್ತೋ ಹೇಳಿ
ಗುತ್ತಾಗ್ತಿಲ್ಲೆ. ಬೇರೆ ಬೇರೆ ಭಾಷೆಯಲ್ಲೂ ಸಹ ಒಳ್ಳೊಳ್ಳೆ ಸಾಹಿತಿಗಳು ಎಷ್ಟೋ ಮಂದಿ ಇದ್ದೊ. ಅಂತಹ ಸಾಹಿತಿಗಳ ಕೃತಿಗಳನ್ನ ಬೇರೆ ಬೇರೆ ಭಾಷೆಗೆ ಹಾಗು ಕನ್ನಡಕ್ಕೂ ಕೂಡ ತರ್ಜುಮೆ ಮಾಡಿ ಅಂತಹ ಪುಸ್ತಕಗಳನ್ನ ನಾವು ಓದ್ತೊ. ಅದೇ ರೀತಿ ಬೇರೆ ಭಾಷೆಯಲ್ಲಿರುವ ಒಳ್ಳೊಳ್ಳೆ ಸಿನಿಮಾಗಳನ್ನ ಕನ್ನಡಕ್ಕೆ ಡಬ್ ಮಾಡಿದರೆ ಯಾರಿಗೆ ತೊಂದರೆ ಆಗ್ತು? ನನ್ನ ಮಟ್ಟಿಗೆ ಹೇಳುದಾದ್ರೆ ಅದು ತಪ್ಪು ಹೇಳಿ ನನ್ಗೆ ಅನಿಸ್ತಿಲ್ಲೆ. ಇದರಿಂದ ಕನ್ನಡಕ್ಕೆ ಯಾವ್ದೇ ಪೆಟ್ಟಿಲ್ಲೆ. ನಿಮ್ಗೆ ಯಾರಿಗಾದ್ರುವ ಹಾಗೆ ಅನಸ್ತೋ ಹೇಗೆ? ನಿಮ್ಮ ಅಭಿಪ್ರಾಯ ಎಂತದು? ಡಬ್ಬಿಂಗ್ ಸರಿನ ತಪ್ಪ? ಹೇಳ್ತ್ರಾ.