Tuesday, April 2, 2013

ನೀರಿಗಾಗಿ ಕಾಯಬೇಕು

ನೀರಿಗಾಗಿ ಕಾಯಬೇಕು
--------------------------
ನೀರು ನೀರೆಂದು
ನಲ್ಲಿಯ ಮುಂದೆ ಕೂತರೆ
ನೀರು ಬಂದೀತೇ ..?
ಇಲ್ಲ , ಬರಲಿಲ್ಲ
ಬದಲು ಬಂದೀತು
ಒಂದಿಷ್ಟು ಕಣ್ಣೀರು !

ಎಷ್ಟು ದಿನ ಕಾಯಬಹುದು
ನೀರ ಹನಿಗಾಗಿ..?
ಬಾಯಾರಿ ಗಂಟಲು ಒಣಗುತಿದೆ
ಕಣ್ಣೀರು ಬತ್ತಿದೆ
ಒಡಲೊಳಗೆ ಹಸಿವಿನ
ಲವಾರಸ ತಳಮಳಿಸುತ್ತಿದೆ
ಹಿಮ ಕರಗಿ ನೀರಾಗುವುದನ್ನು.....
ನಮ್ಮ ಬಿಸಿಯುಸಿರು
ಕರಗಿ ತಂಪಾಗುವುದನ್ನು.......

ಆದರೂ ಕಾಯಬೇಕು
ಚಾತಕ ಪಕ್ಷಿಯಂತೆ
ಆಕಾಶದತ್ತ ನೇರದೃಷ್ಟಿ ಇಟ್ಟು
ಬಾರದ ನೀರಿಗಾಗಿ
ಕಾಯುತ್ತಲೇ ಇರಬೇಕು
ನೀರ ಹನಿ ಇಲ್ಲದಿದ್ದರೂ ಸರಿ ,
ಕನಸಿನಲ್ಲಿ ತೇಲಾಡುವ ನಾವು
ನೋವಿನ ನಿಟ್ಟುಸಿರ
ಹೃದಯದ ’ಫ್ರಿಜ್ ’ ನಲ್ಲಿ ಬೆಚ್ಚಗಿರಿಸಬೇಕು
ಯಾಕೆಂದರೆ ,
ನಾವು ಈ ಭೂಮಿಯಲ್ಲಿ
ಬದುಕಬೇಕಾದವರು ಅದಕ್ಕೇ ..!

ಪ್ರತೀಕ್ಷೆ

ಪ್ರತೀಕ್ಷೆ
----------------

ನೀರವ ವಾತಾವರಣದಲ್ಲಿ
ದೂರದಿಂದ ಕೇಳಿ ಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ ನಲ್ಲೆಯ
ಹೊತ್ತು ತರಲಾರವು

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ , ಇವು ನನ್ನ ನಲ್ಲೆಯ
ಹೊತ್ತು ತರಲಾರವು

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿ ನಿಂತ ಮಾಮರ
ವಸಂತ ಅನುಭವಿಸಿ
ಕೈ ಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ ಪರಿವೆ ಇಲ್ಲದೇ
ನನ್ನ ನಲ್ಲೆಯ ಬರುವಿಕೆಗಾಗಿ ಕಾಯುತ್ತಿದ್ದೇನೆ

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ ನಲ್ಲೆಯ ಬರುವಿಕೆಗಾಗಿ.

ಕಾತರ

ಕಾತರ
-----------
ನೀರವ ವಾತಾವರಣದಲಿ
ಕಳೆದ ವಸಂತದಲಿ
ಮೊಗ್ಗರಳಿ ಹೂವಾಗಿ
ಸುತ್ತೆಲ್ಲಾ ತಂಪೆರಚಿದಂತೆ
ಬದುಕಿನ ನಿಗೂಢತೆಯನಳೆಯುವ
ಮೌನ ಹೊಸ ರೂಪ ತಾಳುತ್ತದೆ.

ಕಣ್ಣಲ್ಲಿ ಮಿಂಚುವ
ಹೊಸ ಭಾವ
ಅಂತರಾಳದಲ್ಲಿ ಮೂಡಿಬಂದ
ಕನಸು , ರೆಕ್ಕೆ ಪುಕ್ಕ ಕಟ್ಟಿ ವಿಹರಿಸುತ್ತದೆ.

ಚಿಗುರು ಮಾಮರದ ಮೇಲೆ
ಕೂತು ಕೂಗುವ ಕೋಗಿಲೆಯಂತೆ ಕೂಗಿ
ಬಣ್ಣದ ರಂಗು ಕಟ್ಟಿ ಹಾರಾಡುತ್ತಾಳೆ.

ಹೊಸ ಹೊಸ ರೂಪದ
ಹೊಸ ದಿಗಂತದಲಿ
ವಿಹರಿಸುತ್ತಾ ನಾಳಿನ ಸವಿ ನೆನಪಿಗಾಗಿ
ಕಾತರಿಸುತ್ತಾಳೆ.....

ಸಂಜೆ ಮಬ್ಬಿನಲಿ

ಸಂಜೆ ಮಬ್ಬಿನಲಿ
---------------
ಬದುಕಿನ ಹಂದರವ ನಿರ್ಮಿಸುತ್ತಲೇ
ಪರಕೀಯನಾಗಿಯೇ ಕರಗಿದ
ನನ್ನೀ ಬದುಕು.....
ನೆನಪುಗಳು ಸಾಯುವುದಿಲ್ಲ
ಭೂತಕಾಲದ ಘೋರಿ ಸೇರಿದ್ದರೂ
ಕುಳಿತುಕೊಂಡೇ ಇರುತ್ತವೆ
ಭೂತ ಪದರಿನಲಿ ಬೆಚ್ಚಗೆ

ಸಂಜೆ ಮಬ್ಬಿನಲಿ ಈಗ
ಹಿನ್ನೆಲೆಯ ಅಲೆಗಳು
ಮತ್ತೆ ಮತ್ತೆ ಹುಟ್ಟಿ ಅಳಿಯುತ್ತಾ
ಬಣ್ಣಗಳು ಕರಗಿ
ಸುಕ್ಕು ಮೂಡುವ ಕಾಲ!
ಸಾವಿನ ಹೊಸ್ತಿಲಲಿ
ಕೂತಿರುವ ನನಗೋ
ನಿರಂತರ ಪಯಣಕ್ಕಾಗಿ ತೆರೆದ
ಕೊನೆಯಿರದ ಇನ್ನಷ್ಟು ದಾರಿಗಳು

ಬದುಕಿನ ಮೆಟ್ಟಿಲಿನಲ್ಲಿ ಕುಳಿತು
ಎಣಿಸುತ್ತಿರುವೆ ಕಳೆದ ದಿನಗಳ
ಹಿಂದೆಲ್ಲಾ ಅದೆಂಥ ಕಾಲ!
ಪ್ರತಿ ವರ್ಷದ ಬೆಚ್ಚನೆಯ ಚಳಿಗಾಲ
ತುಂಬುವಸಂತದ ಹೊಂಗನಸು
ಗಾಳಿ ತುಂಬ ಹಕ್ಕಿಗಳ ಇಂಚರ
ಹಿತವಾದ ಸಂಜೆಗಳು!

ಎಲ್ಲಿ ಹೋಯಿತೋ?
ಕಾಲರಾಯ ಕಸಿದುಕೊಂಡ
ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ
ಈಗೇನುಳಿದಿದೆ...?
ಬರೀ , ಆ ನೆನಪಿನ ಪಳೆಯುಳಿಕೆ
ನಿತ್ಯ ಶಾಶ್ವತ!
ಹಂದರದ ತುಂಬ ತುಕ್ಕು ಹಿಡಿದ ಸರಪಳಿಗಳು
ಆಷಾಢದ ಗಾಳಿಯ ನಡುವೆ
ನಿಸರ್ಗದ ಕಣ್ಣು ಮುಚ್ಚಾಲೆ
ಹಸಿದ ಹೆಬ್ಬುಲಿಯಂತೆ
ವೈಶಾಖದ ರಣ ಬಿಸಿಲು
ಒಣಗಿ ಬತ್ತಿಹೋದ ಕಂಗಳಲ್ಲೀಗ
ಯಾವ ಸೂರ್ಯನೂ ಇಲ್ಲ!

ಬಿರುಕಡಲು

ಬಿರುಕಡಲು
----------
ದುಂಬಿ ಕುಳಿತ ಹೂದಳದ ಪುಳಕ
ಮೆಲುಗಾಳಿಗೆ ಮೆಲ್ಲನೆ ಅಲಗುವ
ಜುಳು ಜುಳು ಹರಿವ ನದಿಯ
ಅಲೆಗಳ ಹಾಗೆ ನವಿರು ಕಂಪನ
ನೀಲಿ ಬಾನಲ್ಲಿ ರೆಕ್ಕೆಬಿಚ್ಚಿ
ಹಾರುವ ಮನಸು
ಹಿಮಾಲಯ ಪರ್ವತದ
ತುದಿಯ ಮಂಜು ಕರಗಿ
ಬಿಳಿ ಹೊಗೆಯಾಗಿ
ಸುತ್ತೆಲ್ಲಾ ಹರಡುವಂತೆ ಹರುಷ!

ಧೋ ಧೋ ಹೊಯ್ಯುವ
ಬಿರುಮಳೆಗೆ
ತುಂಬಿ ಹರಿವ ಹೊಳೆ
ಯಾವುದು ಒಳಗೆ ?
ಯಾವುದು ಹೊರಗೆ ?
ನಿಲ್ಲದ ಕೊರಗು ಕೊನೆತನಕ

ಬೀಸಿ ಬರುವ ಬಿರುಗಾಳಿಗೊಡ್ಡಿದ
ದೀಪದ ಹಾಗೆ ಹೊಯ್ದಾಡುವ ಮನ
ಹುಟ್ಟಿನಲ್ಲಿ ಮುಲುಕಾಡುವ ರಾಗಗಳು
ಬಿರಿಯಲಾರದ ಮೊಗ್ಗುಗಳಂತೆ
ನೋವು ಮಿಡಿಯುವ ಎದೆಗೆ
ನಿರ್ಲಿಪ್ತತೆಯ ಸೆರಗು ಹೊದಿಸಿ
ನಿಶ್ಚಲವಾಗಿ ಬಿದ್ದಿರುವ ಮರಳುದಂಡೆಯನ್ನು
ಮೀರದ ಬಿರುಕಡಲು ನಾನು

ಹೂವಿಗೂ ನೋವಿದೆ

Sunday, January 20, 2013

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದು
ಮುಖ ಕಂಡು ಕುಣಿದೆಡೆಗೆ
ಹುಣ್ಣಿಮೆ ಚಂದ್ರ ಕಂಡ ಸಾಗರದಂತೆ
ಮೈ ಉಬ್ಬಿ ಕುಲುಕುತ್ತಾ ಬಂದವಳೇ
ಈಗ ಎಲ್ಲಿ---?

ಪಶ್ಚಿಮದ ಕಡಲು
ಎತ್ತರಿಸಿ ಬಂಡೆಗಪ್ಪಳಿಸುವಂತೆ
ನಿನ್ನ ಕಣ್ಣು ಕುಂಚವಾಡಿಸಿ
ನನ್ನೆದೆಯ ಮಡಿಲಲ್ಲಿ
ಬೆಳೆದ ಒಲುಮೆಯ ಚಿತ್ರ
ಹಚ್ಚ ಹಸಿರಾಗಿ ಬೆಳೆದಿರುವಾಗ
ಎಲ್ಲಿ ಹೋದೆ
ನನ್ನೆದೆಯ ಬತ್ತಿಸಿ,,,?

ಭೂಮಿಯ ಉತ್ಖಸಿಸಿ
ಹೊರ ತಂದ ಎಣ್ಣೆಯಂತೆ
ಎತ್ತಿತಂದ ಮುತ್ತು ಮಾಣಿಕ್ಯದಿಂದ
ನಿನ್ನ ಸಿಂಗರಿಸಿ
ಬದುಕು ದೋಣಿಯೇರಿ
ದೂರ ಹೋಗುವ ಮುನ್ನ
ಹೃದಯ ತೆರೆದು ಕರಗಿಹೋದೆ
ಮುಂಜಾವಿನ ಮಧುರ ನೀನಾದವಾದೆ.