Wednesday, April 3, 2013

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದು
ಮುಖ ಕಂಡು ಕುಣಿದೆಡೆಗೆ
ಹುಣ್ಣಿಮೆ ಚಂದ್ರ ಕಂಡ ಸಾಗರದಂತೆ
ಮೈ ಉಬ್ಬಿ ಕುಲುಕುತ್ತಾ ಬಂದವಳೇ
ಈಗ ಎಲ್ಲಿ---?

ಪಶ್ಚಿಮದ ಕಡಲು
ಎತ್ತರಿಸಿ ಬಂಡೆಗಪ್ಪಳಿಸುವಂತೆ
ನಿನ್ನ ಕಣ್ಣು ಕುಂಚವಾಡಿಸಿ
ನನ್ನೆದೆಯ ಮಡಿಲಲ್ಲಿ
ಬೆಳೆದ ಒಲುಮೆಯ ಚಿತ್ರ
ಹಚ್ಚ ಹಸಿರಾಗಿ ಬೆಳೆದಿರುವಾಗ
ಎಲ್ಲಿ ಹೋದೆ
ನನ್ನೆದೆಯ ಬತ್ತಿಸಿ,,,?

ಭೂಮಿಯ ಉತ್ಖಸಿಸಿ
ಹೊರ ತಂದ ಎಣ್ಣೆಯಂತೆ
ಎತ್ತಿತಂದ ಮುತ್ತು ಮಾಣಿಕ್ಯದಿಂದ
ನಿನ್ನ ಸಿಂಗರಿಸಿ
ಬದುಕು ದೋಣಿಯೇರಿ
ದೂರ ಹೋಗುವ ಮುನ್ನ
ಹೃದಯ ತೆರೆದು ಕರಗಿಹೋದೆ
ಮುಂಜಾವಿನ ಮಧುರ ನೀನಾದವಾದೆ.

ಮೊಗ್ಗು ಮಾಲೆಯಾಗುವ ಹಾಗೆ

ಮೊಗ್ಗು ಮಾಲೆಯಾಗುವ ಹಾಗೆ
---------------------------------------
ಬಿಳಿ ಹಾಳೆಯ ತುಂಬಾ ಹರವಿಟ್ಟೆ
ಹೊಸ ಅರ್ಥಗಳ
ಹೊಸ ಶಬ್ದಗಳ
ಪದ ಪುಂಜಗಳನ್ನು
ಆದರೆ ಯಾಕೋ
ಅದು ಪದ್ಯವಾಗಲಿಲ್ಲ
ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ
ಇಂಪಾದ ಕಂಠವಷ್ಟೇ ಇತ್ತು
ಕವಿತೆ ಹಾಡಾಗಲು
ಸ್ವರ ನಭಿಯಿಂದುಲಿದು ಬರಬೇಕು !

ಬರ್ರೆಂದು ಸುರಿದ
ಜಡಿ ಮಳೆಯ ಹನಿ
ಟಪಟಪನೆ ಶಬ್ದಿಸುತ್ತಾ
ಮನೆಯ ಮಾಡಿನಿಂದಿಳಿದು
ಅತ್ತಿತ್ತ ಕೊರಕಲಿನಲಿ ಹರಿದು
ಬೇಲಿಯಂಚಿನ ಗಿಡಕೆ
ಜೀವ ತುಂಬುವ ಹಾಗೆ
ಮುಳ್ಳುಕಳ್ಳಿಯ ಮೇಲೂ
ಎದೆ ಹನಿ ಚಿಮುಕಿಸಿ
ಪ್ರೀತಿ ಬೆಳೆಯಬೇಕು
ಹಿಂಡು ಹಿಂಡಾಗಿ ಹಾರಿ
ಬೆಟ್ಟ ಗುಡ್ಡವ ಸುತ್ತಿ
ಹುಲ್ಲು ಚಪ್ಪರಿಯಿಂದ
ಒಂದೊಂದೇ ಕಡ್ಡಿಹೆಕ್ಕಿ
ಹಕ್ಕಿ ಗೂಡುಕಟ್ಟುವ ಪರಿಯಲ್ಲಿ
ನಾವೂ ಕಟ್ಟಬೇಕು
ನಮ್ಮೆದೆಯಲ್ಲೊಂದು ಮಹಲು ಮನೆ.

ಹುಡುಗನೊಳಗಿನ ಪ್ರೀತಿ
ನುಡಿ ಮುತ್ತಾಗುವ ತನಕ
ಕಲ್ಪನೆಯ ಕಂಬಳಿ ಹೊದ್ದು
ಮುಂಜಾವಿನ ಮಂಜುಹನಿಗೆ ಮೈಯೊಡ್ಡಿ
ಅರೆಬಿರಿದ ಮಲ್ಲಿಗೆ ಕೊಯ್ದು
ಮಾಲೆಯಾಗಿ ಮೊಗ್ಗರಳಿ ನಗುವ ಪರಿಗೆ
ಅವಳ ಕಣ್ಣಂಚಿನಲ್ಲಿ
ಹೊಸ ಕನಸು ಚಿಗುರುವಂತೆ
ಕಟ್ಟಬೇಕು ನಾವು ಪ್ರೀತಿ ಮಂದಿರವನ್ನು.

ಆಸೆಯ ಕೊಡಿ....

ಆಸೆಯ ಕೊಡಿ....
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......

Tuesday, April 2, 2013

ಸ್ಮೃತಿ ಪಟಲದೊಳಗೆ

ಸ್ಮೃತಿ ಪಟಲದೊಳಗೆ
-------------------
ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......

ಕ್ಷಮಯಾ ಧರಿತ್ರಿ

ಕ್ಷಮಯಾ ಧರಿತ್ರಿ
----------------
ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

ನಿವೇದನೆ

ನಿವೇದನೆ
-------------
ಕೊರಗದಿರು ಗೆಳತಿ
ನಿನ್ನಷ್ಟಕ್ಕೆ ನೀನೇ
ಕರಗದು ಕಷ್ಟಗಳು
ತಮ್ಮಷ್ಟಕ್ಕೆ ತಾವೇ
ನಿನ್ನೊಡನೆ ಜೊತೆಯಾಗಿ ನಾನಿಲ್ಲವೇನು..?
ಸಂತಸದಂತೆ ನೋವನ್ನೂ ಹಂಚಿಕೊಳ್ಳಲಾರನೇ?

ನಿನ್ನೆ ಸರಿದ ಕ್ಷಣಗಳು
ಬರದೆಂದು ಮುಂದೆ
ನಾಳೆಯನು ಹತ್ತಿರಕ್ಕೆ
ಕರೆಯಲಾರೆವು ಇಂದೇ
ಇವುಗಳ ನಡುವಿರುವ
ಇಂದು ಮಾತ್ರವೇ ನಮ್ಮದು.

ಶ್ರೀಮಂತಗೊಳಿಸೋಣ ಇತಿಹಾಸ
ಭವಿಷ್ಯವ ಮರೆತು
ಒಂಟಿಯೆಂಬ ಭಾವನೆ
ಬಿಟ್ಟುಬಿಡು ನೀನು
ಒಡನಾಡಿಯಾಗಿ ಸದಾ ನಾನಿರುವೆನಿನ್ನು.

ಸಂಜೆ ಸೊಬಗು

ಸಂಜೆ ಸೊಬಗು
---------------------
ಎಂದಿನಂತೆ ಕೆಂಪೆಡರಿದ
ಸೂರ್ಯನ ಕೆಂಬಣ್ಣ
ಪಸರಿಸಿದೆ ಪಶ್ಚಿಮದ
ಬಾನ ದಿಗಂತದಲ್ಲಿ.
ಇದಕ್ಕೆ ಸಾಕ್ಷಿಯೋ ಎಂಬಂತೆ
ಗೂಡು ಸೇರುವ ತವಕದಲಿ
ಚಿಲಿಪಿಲಿಗುಟ್ಟು ಹಾರುವ ಹಕ್ಕಿಗಳು ,
ಮೇಲಿಂದ ಮೇಲೆ
ಧರೆಗೆ ಅಪ್ಪಳಿಸುವ
ಸಮುದ್ರ ರಾಜ !
ಕೊರೆದಷ್ಟೂ ಉದ್ಭವಿಸುವ ಉಸುಕು
ಮುಗಿಯಲಾರದ ಅಕ್ಷಯ ಪಾತ್ರೆ.....!!
ಅಲ್ಲಲ್ಲಿ ಮೊಡಿಬಂದ
ಹೆಜ್ಜೆ ಗುರುತು
ಸೂರ್ಯ ಇಳಿದಂತೆ
ಮೊಡಿ ಬರುವ ನೆರಳು
ದಿನಚರಿಯಲ್ಲಿ ಬರೆಯುವ
ಒಂದು ಸಂಜೆ ಸೊಬಗು..!