Wednesday, April 3, 2013

ನಿಗೂಢ ರಾತ್ರಿಯಲಿ

ನಿಗೂಢ ರಾತ್ರಿಯಲಿ
----------------------
ನಿಗೂಢ ರಾತ್ರಿಯಲಿ ಹೊಳೆಯುವುದು
ಆಗಸದಲ್ಲಿ ನಕ್ಷತ್ರಗಳು
ಇದ್ದೂ ಇಲ್ಲದಂತಿರುತ್ತವೆ
ಸುಮ್ಮನೆ ದಿನದ ಬೆಳಕಿನಲ್ಲಿ

ರಾತ್ರಿಯ ಕತ್ತಲಲ್ಲಿ
ಬಿದ್ದ ಕನಸುಗಳೆಲ್ಲ
ಹೂವಾಗಿ ಅರಳಿ
ಮಂಜು ಮುಸುಕಿದ ಮುಂಜಾವಿನಲಿ
ಕವಿತೆಗಳಾಗಿ ಘಮಘಮಿಸುವುದು
ಬೆಳಕಿನಲ್ಲಿ ಕಂಡಿದ್ದೆಲ್ಲ ಅರ್ಥವಾಗುವುದಿಲ್ಲ
ಮುಂಜಾನೆಗೊಂದು ಬಣ್ಣ.....
ಸಂಜೆಗೆ ಮತ್ತೊಂದು.....

ರಾತ್ರಿಯ ಕಪ್ಪು ಬದಲಾಗುವುದಿಲ್ಲ
ಕ್ಷಣಕ್ಕೊಂದು ಬಣ್ಣ
ಕರಾಳ ಕತ್ತಲಲ್ಲಿ
ಜೀವ ಮೊಳಕೆಯೊಡೆಯುತ್ತದೆ

ಬಾಳಿನ ಇತಿಹಾಸ

ಬಾಳಿನ ಇತಿಹಾಸ
-------------------
ಕತ್ತಲೆಯ ಮೊಲೆಯಡಿಯಲಿ
ಆಸೆಯ ಕಂಗಳಲ್ಲಿ
ಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾ
ಕಷ್ಟ ಸುಖಗಳ ಸರಮಾಲೆಯಡಿಯಲಿ
ಸಾಗುವ ಬದುಕಿನಲ್ಲಿ ; ನಿರಂತರ......
ಆಸೆಯ ಅದಮ್ಯ ಬಯಕೆ
ಬಡತನದ ಕಷ್ಟವನು ಅನುಭವಿಸುತ್ತಿದ್ದರೂ
ಸುಖದ ಹಂಬಲ
ಕತ್ತಲೆಯ ಅನಂತ ನೀಲಾಕಾಶದಲಿ
ಮಿನುಗುವ ಅಸಂಖ್ಯ
ನಕ್ಷತ್ರದ ಬೆಳಕು
ಬೆಳಗಲು ಏನೂ ಸಾಲದು
ಅದೇ ರೀತಿ
ಬಾಳಿನಲಿ ಕಂಡ
ಸಣ್ಣ ಆಸೆಯ ಕೊಡಿಯನ್ನೇ ನೆಚ್ಚಿ
ನಿರಾಶೆಯ ಮುಸುಕಿನಲಿ
ಹೊಳೆಯುವ ಕಪ್ಪು
ಕಣ್ಣೆರಡುಗಳು ಹೇಳುತ್ತವೆ
ಬಾಳಿನ ಇತಿಹಾಸವನ್ನ.

ಆಹ್ವಾನ

ಆಹ್ವಾನ
--------
ಒಮ್ಮೊಮ್ಮೆ ಮಂಜು ಮುಸುಕಿನ
ಮುಂಜಾವಿನಲಿ ತಂಗಾಳಿ ಬೀಸುವಾಗ
ಮನದೊಳಗೆ ಚಿಗುರಿದ ಕವಿತೆ
ಮಾಯವಾಗಿ ವಿದಾಯ ಹೇಳುವ
ಕನಸುಗಳು ಬೀಳುತ್ತವೆ.

ಸುಡು ಬಿಸಿಲ
ಸೂರ್ಯನ ಕಿರಣಕ್ಕೆ
ಹೃದಯ ಮರುಟಿ
ಭಾವನೆ ಸ್ತಬ್ಧವಾದಾಗ
ನನ್ನ ಪ್ರೀತಿಯ ಪ್ರೇಮ
ಹೊತ್ತಿ ಉರಿಯುತ್ತದೆ.

ಮುಸ್ಸಂಜೆ ಹೊತ್ತಿನಲ್ಲಿ
ಪಶ್ಚಿಮದ ದಿಗಂತದಲ್ಲಿ
ಸೂರ್ಯನ ಕೆಂಬಣ್ಣ
ಸಾಗರದ ತುಂಬಾ ಚೆಲ್ಲುತ್ತಿರುವಾಗ
ಹೊರ ಹೊಮ್ಮುವ ಜುಳುಜುಳು ನೀನಾದಗಳು
ನನ್ನೊಳಗಿನ ಭಾವನೆಗಳಿಗೆ
ಲಯಬದ್ಧವಾದ ಶೃತಿಮಿಡಿಯುವ
ನೆನಪುಗಳು ಕಾಡುತ್ತವೆ.

ರಾತ್ರಿಯ ನೀರವತೆಯಲ್ಲಿ
ನನ್ನೀ ಮನದ ತೊಳಲಾಟಕ್ಕೆ
ಸಾಂತ್ವನ ಹೇಳಿ
ಮರುದಿನದ ಮುಂಜಾವಿಗೆ
ಕಾತರದ ಆಹ್ವಾನವೀಯುತ್ತದೆ.

ಮುಂಜಾವಿನ ಹಾಡು

ಕೆಂದಾವರೆಯ ನಿನ್ನ ಮುದ್ದು
ಮುಖ ಕಂಡು ಕುಣಿದೆಡೆಗೆ
ಹುಣ್ಣಿಮೆ ಚಂದ್ರ ಕಂಡ ಸಾಗರದಂತೆ
ಮೈ ಉಬ್ಬಿ ಕುಲುಕುತ್ತಾ ಬಂದವಳೇ
ಈಗ ಎಲ್ಲಿ---?

ಪಶ್ಚಿಮದ ಕಡಲು
ಎತ್ತರಿಸಿ ಬಂಡೆಗಪ್ಪಳಿಸುವಂತೆ
ನಿನ್ನ ಕಣ್ಣು ಕುಂಚವಾಡಿಸಿ
ನನ್ನೆದೆಯ ಮಡಿಲಲ್ಲಿ
ಬೆಳೆದ ಒಲುಮೆಯ ಚಿತ್ರ
ಹಚ್ಚ ಹಸಿರಾಗಿ ಬೆಳೆದಿರುವಾಗ
ಎಲ್ಲಿ ಹೋದೆ
ನನ್ನೆದೆಯ ಬತ್ತಿಸಿ,,,?

ಭೂಮಿಯ ಉತ್ಖಸಿಸಿ
ಹೊರ ತಂದ ಎಣ್ಣೆಯಂತೆ
ಎತ್ತಿತಂದ ಮುತ್ತು ಮಾಣಿಕ್ಯದಿಂದ
ನಿನ್ನ ಸಿಂಗರಿಸಿ
ಬದುಕು ದೋಣಿಯೇರಿ
ದೂರ ಹೋಗುವ ಮುನ್ನ
ಹೃದಯ ತೆರೆದು ಕರಗಿಹೋದೆ
ಮುಂಜಾವಿನ ಮಧುರ ನೀನಾದವಾದೆ.

ಮೊಗ್ಗು ಮಾಲೆಯಾಗುವ ಹಾಗೆ

ಮೊಗ್ಗು ಮಾಲೆಯಾಗುವ ಹಾಗೆ
---------------------------------------
ಬಿಳಿ ಹಾಳೆಯ ತುಂಬಾ ಹರವಿಟ್ಟೆ
ಹೊಸ ಅರ್ಥಗಳ
ಹೊಸ ಶಬ್ದಗಳ
ಪದ ಪುಂಜಗಳನ್ನು
ಆದರೆ ಯಾಕೋ
ಅದು ಪದ್ಯವಾಗಲಿಲ್ಲ
ಅದಕ್ಕೆ ರಾಗವಿರಲಿಲ್ಲ , ಲಯವಿರಲಿಲ್ಲ
ಇಂಪಾದ ಕಂಠವಷ್ಟೇ ಇತ್ತು
ಕವಿತೆ ಹಾಡಾಗಲು
ಸ್ವರ ನಭಿಯಿಂದುಲಿದು ಬರಬೇಕು !

ಬರ್ರೆಂದು ಸುರಿದ
ಜಡಿ ಮಳೆಯ ಹನಿ
ಟಪಟಪನೆ ಶಬ್ದಿಸುತ್ತಾ
ಮನೆಯ ಮಾಡಿನಿಂದಿಳಿದು
ಅತ್ತಿತ್ತ ಕೊರಕಲಿನಲಿ ಹರಿದು
ಬೇಲಿಯಂಚಿನ ಗಿಡಕೆ
ಜೀವ ತುಂಬುವ ಹಾಗೆ
ಮುಳ್ಳುಕಳ್ಳಿಯ ಮೇಲೂ
ಎದೆ ಹನಿ ಚಿಮುಕಿಸಿ
ಪ್ರೀತಿ ಬೆಳೆಯಬೇಕು
ಹಿಂಡು ಹಿಂಡಾಗಿ ಹಾರಿ
ಬೆಟ್ಟ ಗುಡ್ಡವ ಸುತ್ತಿ
ಹುಲ್ಲು ಚಪ್ಪರಿಯಿಂದ
ಒಂದೊಂದೇ ಕಡ್ಡಿಹೆಕ್ಕಿ
ಹಕ್ಕಿ ಗೂಡುಕಟ್ಟುವ ಪರಿಯಲ್ಲಿ
ನಾವೂ ಕಟ್ಟಬೇಕು
ನಮ್ಮೆದೆಯಲ್ಲೊಂದು ಮಹಲು ಮನೆ.

ಹುಡುಗನೊಳಗಿನ ಪ್ರೀತಿ
ನುಡಿ ಮುತ್ತಾಗುವ ತನಕ
ಕಲ್ಪನೆಯ ಕಂಬಳಿ ಹೊದ್ದು
ಮುಂಜಾವಿನ ಮಂಜುಹನಿಗೆ ಮೈಯೊಡ್ಡಿ
ಅರೆಬಿರಿದ ಮಲ್ಲಿಗೆ ಕೊಯ್ದು
ಮಾಲೆಯಾಗಿ ಮೊಗ್ಗರಳಿ ನಗುವ ಪರಿಗೆ
ಅವಳ ಕಣ್ಣಂಚಿನಲ್ಲಿ
ಹೊಸ ಕನಸು ಚಿಗುರುವಂತೆ
ಕಟ್ಟಬೇಕು ನಾವು ಪ್ರೀತಿ ಮಂದಿರವನ್ನು.

ಆಸೆಯ ಕೊಡಿ....

ಆಸೆಯ ಕೊಡಿ....
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......
----------------
ನೀರವ ವಾತಾವರಣದಲ್ಲಿ
ದೂರದಿಂದ ಕೇಳಿಬರುವ
ಲಯಬದ್ಧ ಸಂಗೀತ
ಕೋಗಿಲೆಯ ಇಂಪಾದ ಇಂಚರಗಳು
ನನ್ನ ಮನವ ಛಿದ್ರಗೊಳಿಸಲಾರವು
ಕಾರಣ ಅವುಗಳು ನನ್ನ
ನಲ್ಲೆಯ ಹೊತ್ತು ತರಲಾರವು.

ಹತ್ತಿರದಲ್ಲಿ ನಡೆಯುವ
ರಂಗ ಸಜ್ಜಿನ ಗೆಜ್ಜೆ ಕುಣಿತ
ಹಕ್ಕಿಗಳ ಪಟ ಪಟ ಸದ್ದು
ಲಲ್ಲೆಗರೆಯುವ ತಾಯಿ
ಇವುಗಳು ನನ್ನ ಎಚ್ಚರಗೊಳಿಸಲಾರವು
ಯಾಕೆಂದರೆ ಇವು ನನ್ನ
ನಲ್ಲೆಯಹೊತ್ತು ತರಲಾರವು.

ಹಚ್ಚ ಹಸಿರಿನ ಸಿರಿತನದಲಿ
ಚಿಗುರಿನಿಂತ ಮಾಮರ
ವಸಂತ ಅನುಭವಿಸಿ
ಕೈಬೀಸಿ ಕರೆದಾಗ ,
ನವಿಲು ಗರಿಬಿಚ್ಚಿ ಕುಣಿದಂತೆ
ನಾನು ಕುಣಿಯುವುದಿಲ್ಲ
ಏಕೆಂದರೆ , ಇದಾವುದರ
ಪರಿವೆ ಇಲ್ಲದೇ ನನ್ನ ನಲ್ಲೆಯ
ಬರುವಿಕೆಗಾಗಿ ಕಾಯುತ್ತಿದ್ದೇನೆ.

ಆಕಾಶದಲ್ಲಿ ಕಪ್ಪು ಹಗುರ ಕರಗಿ
ಸಾವಕಾಶವಾಗಿ ಬೆಳ್ಳಿ ಮೂಡಿದಂತೆ
ಮನದಾಳದಲ್ಲಿ ಅಡಗಿರುವ
ಯಾವುದೋ ಒಂದು ಆಸೆಯ ಕೊಡಿ
ನಿಮಿರಿ ನಿಲ್ಲುತ್ತದೆ
ನಲ್ಲೆಯ ಬರುವಿಕೆಗಾಗಿ......

Tuesday, April 2, 2013

ಸ್ಮೃತಿ ಪಟಲದೊಳಗೆ

ಸ್ಮೃತಿ ಪಟಲದೊಳಗೆ
-------------------
ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......