Wednesday, April 3, 2013

ಎಲ್ಲಿ ಹೋದೆ ಸಖಿ.....?

ಎಲ್ಲಿ ಹೋದೆ ಸಖಿ.....?
-------------------------
ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ...?

ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತು
ನನ್ನ ಕನಸಿನ ಹಾಗೆ ಅಚ್ಚೊತ್ತಿದೆ
ಆಗಸದ ತುಂಬಾ
ಮುತ್ತುತ್ತಿದೆ ಕರಿಮೋಡ
ಆವರಿಸುತಿದೆ ಕತ್ತಲೆ ಆಳವಾಗಿ
ಇಂಥ ರಾತ್ರಿಯಲ್ಲೂ
ಎಂಥ ಬೇಗೆ..!
ಈ ರಾತ್ರಿಯಲ್ಲಿ ನಾನೊಂಟಿಯಾಗಿರಲಾರೆ
ಸಖಿ ಬರಲಾರೆಯಾ ಮತ್ತೆ ?

ಮೂಡುತಿದೆ ಬೆವರಹನಿ ಹಣೆಯ ತುಂಬಾ
ಎದೆಯೊಳಗೆ ನಡುಕ ಯಾಕೋ ಗೊತ್ತಿಲ್ಲ
ಆರಬಾರದು ಅಲ್ಲಿ ಉರಿಯುತ್ತಿರುವ ದೀಪ
ನೀ ಬರುವ ತನಕ

ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ.....??

ನಿನಗಿಲ್ಲ ಗೆಳತಿ ಬಾಳು

ನಿನಗಿಲ್ಲ ಗೆಳತಿ ಬಾಳು
--------------------

ಗೆಳತಿ , ನೀನೊಬ್ಬಳೇ ಇಲ್ಲಿ
ಕೂತರೆ , ನಿಂತರೆ , ನಕ್ಕರೆ
ಸಮಾಜ ಜನರ
ಕಣ್ಣಿಗೆ ಆಹಾರವಾಗುವೆ
ನಿನ್ನ ನೋವು ವೇದನೆಯರಿತು
ಒಂದೆರಡು ಸಮಾಧಾನದ
ಮಾತನಾಡುವ ಜನರು ಎಷ್ಟಿದ್ದಾರೆ....?
ಅಲ್ಲೊಬ್ಬ , ಇಲ್ಲೊಬ್ಬ
ಶ್ರೀಮಂತ ಹೃದಯದವರು ಇರಬಹುದು !
ನಿನ್ನ ಬದುಕಿಗೆ
ದ್ವಂದ್ವಾರ್ಥ ಕಲ್ಪಿಸಿ
ಬದುಕಿಗೆ ರಂಗು ರಂಗಿನ
ಬಣ್ಣ ಕಟ್ಟಿ
ಸುದ್ದಿ ಭಿತ್ತರಿಸಿ
ತಾವು ಸಂಭಾವಿತರೆಂದು ಭೀಗುತ್ತ
ಅಲ್ಲಲ್ಲಿ ಭಾಷಣ ಬಿಗಿದು
ನಿನ್ನ ಸ್ವಾತಂತ್ರ್ಯಕ್ಕೆ
ಭಂಗ ತರುವ
ಇವರ ನಡುವೆ
ನಿನಗಿಲ್ಲ ಗೆಳತಿ ಬಾಳು..!!

ಬಾಳಿನ ಇತಿಹಾಸ

ಬಾಳಿನ ಇತಿಹಾಸ
---------------------
ಕತ್ತಲೆಯ ಮೂಲೆಯಡಿಯಲಿ
ಆಸೆಯ ಕಂಗಳಲ್ಲಿ
ಬೆಳಕಿಗಾಗಿ ನಿರಂತರ ನಿರೀಕ್ಷಿಸುತ್ತಾ
ಕಷ್ಟ , ಸುಖಗಳ ಸರಮಾಲೆಯಡಿಯಲಿ
ಸಾಗುವ ಬದುಕಿನಲ್ಲಿ
ನಿರಂತರ ಆಸೆಯ
ಅದಮ್ಯ ಬಯಕೆ......
ಬಡತನದ ಕಷ್ಟವನು ಅನುಭವಿಸುತ್ತಿದ್ದರೂ
ಸುಖದ ಹಂಬಲ......
ಕತ್ತಲೆಯ ಅನಂತ ನೀಲಾಕಾಶದಲಿ
ಮಿನುಗುವ ಅಸಂಖ್ಯ
ನಕ್ಷತ್ರದ ಬೆಳಕು
ಬೆಳಗಲು ಏನೂ ಸಾಲದು.
ಅದೇ ರೀತಿ
ಬಾಳಿನಲಿ ಕಂಡ
ಸಣ್ಣ ಆಸೆಯ ಕೊಡಿಯನ್ನೇ ನೆಚ್ಚಿ
ನಿರಾಶೆಯ ಮುಸುಕಿನಲಿ
ಹೊಳೆಯುವ ಕಪ್ಪು
ಕಣ್ಣೆರಡುಗಳು ಹೇಳುತ್ತವೆ
ಬಾಳಿನ ಇತಿಹಾಸವನ್ನ.

ಮತ್ತೇಕೆ ಕಾಡುತಿದೆ....?

ಮತ್ತೇಕೆ ಕಾಡುತಿದೆ....?
---------------------
ದಟ್ಟ ಕಾಡಿನುದ್ದಕ್ಕೂ ನೆಟ್ಟ
ಸಾಲು ಸಾಲು ಮರಗಳ
ನೆತ್ತಿ ಮುತ್ತಿಡುವ ನೀಲಬಾನು
ಕಂಗೊಳಿಸುತಿಹುದು ಅರಳು ಮಲ್ಲಿಗೆಯ
ನಗು ನಗುವಿನ ಹೂ ಕಮಾನು
ಸಾಗರದ ತೆರೆಯ
ತೆರೆಮರೆಯ ಆಟದಲಿ
ಮುಚ್ಚಾಲೆಯಾಡಿ ಚುಕ್ಕೆ
ಎದ್ದೆದ್ದು ಕುಣಿದು ಕುಪ್ಪಳಿಸಿದ್ದು
ತೀರದೆಡೆ ಸೇರುವವು
ಮಳಲು ತೆಕ್ಕೆ !

ಚೆಂದಿರನ ಬೆಳದಿಂಗಳ
ಹಾಸಿಗೆ ಹಾಸಿರುವ ಪೂರ್ಣ ರಾತ್ರಿ
ಮಳಲು ಮಂಚದೆಡೆ
ನೂತನದ ಅಭಿಸಾರ !
ಸಮ್ಮೋಹನ ಧಾತ್ರಿ ತಂಗಾಳಿಯೊಡನೆ
ಸರಸ ಸಲ್ಲಾಪ ಸಾಕು ಬಿಡು
ಸಾಕು ಆ ಕಡಲ ಸೆಳೆತ !
ನಾ ಕೇಳಲಾರೆ ನಿನ್ನೊಂಟಿದನಿ ಮಿಡಿತ
ಸೊಬಗಿನಡೆಗೆಯ ತುಡಿತ
ನೆಲದೊಡಲ ಬಗೆದು
ಮೇಲೇರಿ ಮುಗಿಲೇರಿ
ಅಲೆಯುತ್ತಿರುವ ಮಧುರ ನೆನಪ
ಮತ್ತೇಕೆ ಕರೆ ಕರೆದು ಕಾಡುತಿದೆ
ಸುಮ್ಮನೆಯ ಸೊಬಗಿನಡೆಗೆ

ಹಗಲು-ಕತ್ತಲೆಗಳ ನಡುವೆ

ಹಗಲು-ಕತ್ತಲೆಗಳ ನಡುವೆ
---------------------------

ಹಗಲು ಕತ್ತಲೆಗಳ ನಡುವೆ
ಒಂದೊಂದೇ ಬಿಚ್ಚಿಕೊಳ್ಳುವ
ಸುರುಳಿ ಕನಸುಗಳು
ಬಾಳ ಪಥದಲ್ಲಿ
ಹಾದು ಹೋಗುವಾಗ
ಬಯಕೆಗಳನ್ನು ಬಚ್ಚಿಟ್ಟಿರುವೆನೇ
ಎಂದು ಹಿಂದಿರುಗಿನೋಡಿ
ಅದರ ನೆರಳೂ ಕೂಡ ಕಾಣದೆ
ನನ್ನೀ ಬಯಕೆಗಳು
ಭೂಮಿಯಲ್ಲಿ ಹುದುಗಿಹೋದ
ನಿಧಿ ನಿಕ್ಷೇಪಗಳು....!

ಬಯಕೆ ಎಂದಾದರೊಂದಿನ
ಗರ್ಭದಿಂದ ಹೊರಬರಬಹುದೆಂಬ
ವಿಶ್ವಾಸ ಈಗಿಲ್ಲ..!
ನಮಗಿರುವ,
ಇಂದು- ನಾಳಿನ ಬಯಕೆಗಳು
ಹಗಲು- ಇರುಳುಗಳಿಲ್ಲದೇ
ಒಂದೇ ಸಮನೆ
ಸಾಗುತಿದೆ ಎಂದೆಂದೂ......
ಸರಿಯುತ್ತಿರುವ ದಿನಗಳನ್ನೇ ಎಣಿಸುತ್ತಾ
ಅದರ ಸಂಗಡ
ನೆನಪಿನಾಳದಲ್ಲಿ ಹುದುಗಿಹೋಗುತ್ತೇನೆ.

ಇದು ಸತ್ಯ....!

ಇದು ಸತ್ಯ....!
-----------------
ಯುದ್ಧವೇ ಕ್ಷತ್ರಿಯ
ಧರ್ಮವೆಂದರಿತ ಅಭಿಮನ್ಯು
ಕೌರವರ ಮೋಸಕ್ಕೆ ಸಿಕ್ಕಿ
ಚಕ್ರವ್ಯೂಹ ಭೇದಿಸಿ
ಹೊರಬರಲಾರದೆ ಸತ್ತು ಅಮರನಾದ..!!
ಮೌಲ್ಯಮಾಪನದೊಳಗೆ ಸಿಕ್ಕಿ
ಚರಿತ್ರ ಹೀನರಾದವರ
ಸಾವು ಅಮರವೇ...?

ಹಗಲು- ರಾತ್ರಿ
ಮಳೆ - ಬಿಸಿಲೆನ್ನದೆ
ಜೀವ ತೇದು,
ಮಣ್ಣಲ್ಲಿ ಬೆರೆತು
ಉಸಿರಾಡುವಾಗ ಸಿಕ್ಕುವುದೇನು..?
ಬೆವರು ಸುರಿಸಿ
ಕಲ್ಲಿನ ಜಲ್ಲಿಯನು ಒಡೆಯುತ್ತಾ
ಆಳೆತ್ತರಕ್ಕೆ ಕಟ್ಟಿದ ಮಹಲು
ಕೊಟ್ಟೀತೇ ನೆರಳು..?

ಸೂಕ್ಷ್ಮವಾಗಿ ನೇಯ್ದ ಬಟ್ಟೆ ಇದ್ದರೂ
ತಪ್ಪದು ಚಿಂದಿ ಬಟ್ಟೆಯ ಸಹವಾಸ...!
ಕಸುಬೇ ದೇವರೆಂದು ನಂಬಿಸಿ
ಗೋಣು ಕೊಯ್ಯುವ ಸಮಾಜದ
ದುಷ್ಟ ಶಕ್ತಿಗಳ ಮುಖವಾಡಗಳನ್ನು
ಹೊರಗೆಡವಿದಾಗಲೇ ಬದುಕುತ್ತೇವೆ ನಾವು.

ಮೊರೆ

ಮೊರೆ
-------------
ಮೇಲೆ ನೀಲಾಕಾಶ
ಕೆಳಗೆ ಭೂಮಿಯಲ್ಲಿ ಹೂತು
ಮೇಲೆ ಬರಲಾರದೇ
ಮತ್ತೂ ಮತ್ತೂ ತನ್ನಾಳಕ್ಕೇ
ಎಳೆದುಕೊಳ್ಳುತ್ತಿರುವ ಭೂಮಿ
ಇನ್ನೂ ಕ್ಷೀಣವಾಗಿರದ
ನನ್ನ ಎದೆಬಡಿತದ
ಸದ್ದಿಗೆ ಕಿವಿಗೊಟ್ಟು
ನನಗೆ ಸಹಾಯ ಮಾಡಲಾರಿರಾ?

ಅಂಗಳದ ಸುತ್ತ
ಕುಲುಕುಲು ನೀನಾದ
ಅಳುವ ಮಗುವಿನ ಸಾಂತ್ವನ
ಬಾನಾಕಾಶದಲ್ಲಿ ಹರಡಿರುವ
ಕಪ್ಪು ಮೋಡ
ಸಾಗರದ ಗಂಭೀರ ಮೊರೆತ
ತನ್ನೊಡಳೊಳಗೆ ಎಳೆದುಕೊಳ್ಳುವ
ಪರಿಧಿಯಿಂದ ಹೊರಜಗತ್ತಿಗೆ
ತರಲು ಪ್ರಯತ್ನಿಸಿ
ಸಾಯುವ ಹಸಿ ಜೀವಕ್ಕೆ
ಹೊಸ ನೀರು ಕೊಟ್ಟು ಬೆಳೆಸಿ
ಹೊಸ ಉಸಿರು ಕೊಟ್ಟು ಕಾಪಾಡಿ.