Wednesday, April 3, 2013

ಹೆಜ್ಜೆಗಳು,


 
ಹೆಜ್ಜೆಗಳು,
------------------

ನಿಶೆಯ ನೀರವತೆಯಲ್ಲಿ
ಮನ ಜಾಗೃತಗೊಂಡು
ಕಣ್ತೆರೆದು ನೋಡಿದಾಗ
ನಿನ್ನ ಮೃದು ಮೃಧುರ ಹೆಜ್ಜೆಗಳಲ್ಲಿನ
ಗೆಜ್ಜೆಗಳ ಸದ್ದು!
ಬೆಚ್ಚಿ ಬಿದ್ದರೆ
ನಾಲ್ಕು ಹನಿ ಕಣ್ಣೀರು ಮಿಡಿದು
ಜೋಗುಳ ಹಾಡುತ್ತವೆ

ಈಗ,
ಬೆಳದಿಂಗಳ ರಾತ್ರಿಯಲ್ಲಿ
ಮತ್ತೊಮ್ಮೆ ಕಣ್ಣರಳಿಸಿಜ್ಜೆಗಳ್
ಮೆಲ್ಲನೆ ಶಬ್ದಿಸುವ
ಗೆಜ್ಜೆಗಳ ಸದ್ದಾಲಿಸಿ
ನಿನ್ನ ಹೆಜ್ಜೆಗಳ ಹಿಂಬಾಲಿಸಲು ತವಕಿಸುತ್ತೇನೆ

ಹಾಲು ಚೆಲ್ಲಿದ
ಬೆಳದಿಂಗಳ ರಾತ್ರಿಯಲ್ಲಿ
ರಸ್ತೆಯನ್ನೆಲ್ಲಾ ಕೆದಕಿ
ಹೆಜ್ಜೆ ಗುರುತು ಕಾಣದೆ
ಕಂಗಾಲಾಗಿ ದಿಗಿಲುಗೊಂಡಾಗ.....
ದೂರದಲ್ಲೆಲ್ಲೋ ನೀ ನಡೆವ
ಹೆಜ್ಜೆ ಸಪ್ಪಳಕೆ ಕಣ್ಮುಚ್ಚುತ್ತೇನೆ
ನಾಳೆಯ ನಿಶೆಯ ನೀರವತೆಯಲ್ಲಿ
ಮತ್ತೆ ನೀ ಇಟ್ಟ
ಹೆಜ್ಜೆಗಳ ಎಣಿಸಲು.....

ಪ್ರಾರ್ಥನೆ

ಪ್ರಾರ್ಥನೆ
-------------
ಆಷಾಢದಲ್ಲೊಂದು ದಿನ
ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆ
ತುಂಬಿ ಹರಿವ ಹೊಳೆ
ಬಳಿ ಸಾರಿ ಬಂದಂತೆ

ತೆವಳುತ್ತಾ ತೆವಳುತ್ತಾ
ಬೇರು, ಜೀವಜಲ ಹುಡುಕುತ್ತಾ
ತೊರೆ ದೂರವಿದ್ದರೂ
ತಂಪು ಹೊತ್ತು
ಬರುವ ತಂಗಾಳಿಯಂತೆ

ಮುಂಜಾನೆಯ ಎಳೆಬಿಸಿಲಿಗೆ
ಮೊಗ್ಗರಳಿ ಲಾಸ್ಯದಲಿ ಅರಳಿದ
ಹೂಗಳ ಪರಿಮಳಿದ ಭಾರಕ್ಕೆ
ಬೀಸುವ ಗಾಳಿಯಲ್ಲಿ
ಸುಗಂಧ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟ
ಕಿಟಕಿ, ಬಾಗಿಲು
ಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆ
ಇನ್ನೂ ಸ್ವಲ್ಪ ಹೊತ್ತು
ಇರಬಾರದೇ ಹೀಗೆ.....?!

ಸುಮ್ಮನೆ ನಿಂತಂತಿದೆ ಮರ

ಸುಮ್ಮನೆ ನಿಂತಂತಿದೆ ಮರ
------------------------------

ಅಲ್ಲೇ, ಆ ಬಯಲ ದಾರಿಗುಂಟ
ಸುಮ್ಮನೆ ನಿಂತಂತಿದೆ ಮರ
ಕಂದು ತೊಗಟೆಯ ಬಟ್ಟೆ ತೊಟ್ಟು
ಹಸಿರ ತೇರ ಹೊತ್ತು
ಮೈ ತುಂಬಾ ಕೆಂಡ ಸಂಪಿಗೆ
ದಿನಾ ನೋಡಿದರೆ
ಹೀಗೆಯೇ ಇದೆ
ಸದಾ ಎನ್ನುವಂತೆ ಬೆಳೆದು

ಭೂಮಿಯ ಆಳಕ್ಕೆ ಬೇರುಬಿಟ್ಟ
ಒಡಲನಾಳದಿಂದ ನೀರ ಹೀರಿ
ಕಾಂಡ, ಕಾಲುವೆಯಲಿ ಹರಿದು
ಮೇಲೇರಿ, ಟೊಂಗೆ ಟಿಸಿಲುಗಳ
ಕವಲು ದಾರಿಯಲಿ ಒಯ್ದು
ಇಡೀ ಮರವೇ ಹಸಿಹಸಿರಾಗಿದೆ

ಬಿಸಿಲು ಹೀರಿ ಹೂನಗೆ ನಕ್ಕು
ಕನಸ ಬೀಜವ ಕಟ್ಟಿ
ಎಲ್ಲೆಲ್ಲೂ ಕಳಿಸುತಿದೆ
ಹಣ್ಣಿನ ತಂತ್ರದಲಿ
ಬೀಸಿ ಬಂದ ಮೆಲುಗಾಳಿಗೆ
ನಲಿದು ಪಿಸು ದನಿಯಲಿ ಉಲಿದು
ನೆಲದ ಬೇರನು ಹಿಡಿದು
ಆಗಸದ ಕಡೆ ನೋಡಿ
ನಿರುಮ್ಮಳವಾಗಿ ಇದೆ
ಹೂವಿನಂತೆ ಬಾಡಿಹೋಗುವೆನೆಂಬುದ ಮರೆತು.

ಮನಸು ತುಂಬಿಕೊಂಡರೆ.....

ಮನಸು ತುಂಬಿಕೊಂಡರೆ.....
---------------------------
ಗೋಡೆಗಳ ಒಳಗೆ
ಗೋಡೆಗಳಾಚೆ ಹೊರಗೆ
ಕೈ, ಕಣ್ಣುಗಳಿಗೆ
ತೆರೆದು ಬಿದ್ದಿದೆ
ಬಯಲು ಆಗಸ!
ಎಷ್ಟೊಂದು ಪದಗಳು ಒಳ ಹೊರಗೆ
ತುಂಬಿಕೊಳ್ಳಲು ಮನಸು

ಕೈಗೆಟುಕುವುದು ಕಂಗಳಿಗೆ ಬೇಡ
ಕಣ್ಣುಗಳಿಗೆ ಕಂಡಿದ್ದು
ಕೈಗೆ ನಿಲುಕದು
ಅತ್ತಿತ್ತ ಹುಡುಕುವ
ಕೈ ಕಣ್ಣುಗಳಿಗೆ
ಹೃದಯ ಕದ ತೆರೆಯದು
ಅದರ ಬಡಿತವೇ ಬೇರೆ!

ಬಳ್ಳಿ ಬಾಡದಹಾಗೆ ನೋಡಿಕೊಳ್ಳುವ
ಲಯದ ಬಾಳೊಮ್ಮೆ
ಭಾವದ ಆಘಾತಕ್ಕೆ
ಲಯ ತಪ್ಪಿಸಿ ನಿಂತರೆ....
ಬಳ್ಳಿ ಬೇರು ಕಿತ್ತಂತೆ!
ಹಾಗಾಗದಂತೆ,
ಕಂಗಳು ಹೊರಡುವ ವೇಗದೊಂದಿಗೆ
ಕೈ ಸ್ಪರ್ಧೆಗಿಳಿಯದೆ
ಅಡಗಿರುವ ಮನಸಿನ ಓಟಕ್ಕೂ
ಕೈ ಜೋಡಿಸದೆ ಇದ್ದು
ಮನಸು ತುಂಬಿಕೊಂಡರೆ
ಉದ್ದಾಗದಿದ್ದರೂ ಕೈ, ಕಾಲು
ರೆಕ್ಕೆ ಮೂಡಿ ನನಸಾಗುವುದು
ಕನಸು ಪುಟ್ಟ ಗೂಡೊಳಗೇ..!

ನೆನಪು

ನೆನಪು
---------
ನಾ ನೆಟ್ಟು ಬೆಳೆಸಿದ
ಗಿಡದ ತುಂಬಾ ಅರಳಿದ
ಘಮಘಮಿಸುವ ಹೂಗಳ
ಪ್ರತಿ ಪಕಳೆಗಳ ಮೇಲೆ
ಬಿದ್ದ ಮುಂಜಾವಿನ
ಮಂಜಿನ ಹನಿಗಳು
ಹೊಳೆಯುತ್ತವೆ ಸೂರ್ಯ
ರೇಶ್ಮೆಯ ಹೊಂಗಿರಣಗಳ
ಲಾಸ್ಯ ಹೊರಹೊಮ್ಮುವ
ಪ್ರಭೆಯಲ್ಲಿ ನಿನ್ನ
ರಾಗಾನುರಾಗ ರಂಜಿತ
ಕೋಮಲ ಮುಖಾರವಿಂದದಿಂದ
ಚಿಮ್ಮುವ ನಸು ನಗೆಯ
ಪ್ರತಿಫಲದ ನೆನಪು.
ಈ ಗಿಡದ ಹಸಿರು ಬಾಡಿ
ಮೆಲ್ಲನೆ ಗಾಳಿಗೆ
ತಲೆ ಬಾಗಿದಾಗ
ಪಟಪಟನೆ ಉದುರುವ
ಪಾರಿಜಾತದ ಹೂಗಳು
ನೆಲತುಂಬಾ ಹಾಸುಹಾಸು
ಬಿದ್ದ ಹಾಗೆ,
ನಿನ್ನ ಹಾಲ್ಗೆನ್ನೆಯ ಮೇಲೆ
ಬಿದ್ದು ಉರುಳಿ ಬೀಳುವ
ಕಣ್ಣೀರ ಮುತ್ತುಗಳ ನೆನಪು.......

ಎಲ್ಲಿ ಹೋದೆ ಸಖಿ.....?

ಎಲ್ಲಿ ಹೋದೆ ಸಖಿ.....?
-------------------------
ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ...?

ಅಲ್ಲೇ ಇದೆ ನಿನ್ನ ಹೆಜ್ಜೆ ಗುರುತು
ನನ್ನ ಕನಸಿನ ಹಾಗೆ ಅಚ್ಚೊತ್ತಿದೆ
ಆಗಸದ ತುಂಬಾ
ಮುತ್ತುತ್ತಿದೆ ಕರಿಮೋಡ
ಆವರಿಸುತಿದೆ ಕತ್ತಲೆ ಆಳವಾಗಿ
ಇಂಥ ರಾತ್ರಿಯಲ್ಲೂ
ಎಂಥ ಬೇಗೆ..!
ಈ ರಾತ್ರಿಯಲ್ಲಿ ನಾನೊಂಟಿಯಾಗಿರಲಾರೆ
ಸಖಿ ಬರಲಾರೆಯಾ ಮತ್ತೆ ?

ಮೂಡುತಿದೆ ಬೆವರಹನಿ ಹಣೆಯ ತುಂಬಾ
ಎದೆಯೊಳಗೆ ನಡುಕ ಯಾಕೋ ಗೊತ್ತಿಲ್ಲ
ಆರಬಾರದು ಅಲ್ಲಿ ಉರಿಯುತ್ತಿರುವ ದೀಪ
ನೀ ಬರುವ ತನಕ

ಎಲ್ಲಿ ಹೋದೆ ಸಖಿ
ಕತ್ತಲೆಯ ಮರೆಯಲ್ಲಿ
ನನ್ನ ಬಂಧಿಸಿ ಮುತ್ತಿಕ್ಕಿ
ಮಧುರ ನೆನಪನುಣಿಸಿ.....??

ನಿನಗಿಲ್ಲ ಗೆಳತಿ ಬಾಳು

ನಿನಗಿಲ್ಲ ಗೆಳತಿ ಬಾಳು
--------------------

ಗೆಳತಿ , ನೀನೊಬ್ಬಳೇ ಇಲ್ಲಿ
ಕೂತರೆ , ನಿಂತರೆ , ನಕ್ಕರೆ
ಸಮಾಜ ಜನರ
ಕಣ್ಣಿಗೆ ಆಹಾರವಾಗುವೆ
ನಿನ್ನ ನೋವು ವೇದನೆಯರಿತು
ಒಂದೆರಡು ಸಮಾಧಾನದ
ಮಾತನಾಡುವ ಜನರು ಎಷ್ಟಿದ್ದಾರೆ....?
ಅಲ್ಲೊಬ್ಬ , ಇಲ್ಲೊಬ್ಬ
ಶ್ರೀಮಂತ ಹೃದಯದವರು ಇರಬಹುದು !
ನಿನ್ನ ಬದುಕಿಗೆ
ದ್ವಂದ್ವಾರ್ಥ ಕಲ್ಪಿಸಿ
ಬದುಕಿಗೆ ರಂಗು ರಂಗಿನ
ಬಣ್ಣ ಕಟ್ಟಿ
ಸುದ್ದಿ ಭಿತ್ತರಿಸಿ
ತಾವು ಸಂಭಾವಿತರೆಂದು ಭೀಗುತ್ತ
ಅಲ್ಲಲ್ಲಿ ಭಾಷಣ ಬಿಗಿದು
ನಿನ್ನ ಸ್ವಾತಂತ್ರ್ಯಕ್ಕೆ
ಭಂಗ ತರುವ
ಇವರ ನಡುವೆ
ನಿನಗಿಲ್ಲ ಗೆಳತಿ ಬಾಳು..!!