Thursday, December 9, 2010

ಆಷಾಢದಲ್ಲೊಂದು ದಿನ

ಆಷಾಢದಲ್ಲೊಂದು ದಿನ
ಇದ್ದಕ್ಕಿದ್ದಂತೆ ನೀನು ಬಂದೆ
ಇಳಿ ಸಂಜೆ ಮಳೆಯಂತೆ
ತುಂಬಿ ಹರಿವ ಹೊಳೆ
ಬಳಿ ಸಾರಿ ಬಂದಂತೆ
ತೆವಳುತ್ತಾ ತೆವಳುತ್ತಾ
ಬೇರು ,ಜೀವ ಜಲ ಹುಡುಕುತ್ತಾ....
ತೊರೆ ದೂರವಿದ್ದರೂ
ತಂಪು ಹೊತ್ತು
ಬರುವ ತಂಗಾಳಿಯಂತೆ....
ಮುಂಜಾನೆಯ ಎಳೆ ಬಿಸಿಲಿಗೆ
ಮೊಗ್ಗರಳಿ ಲಾಸ್ಯದಲ್ಲಿ ಅರಳಿದ
ಹೂಗಳ ಪರಿಮಳದ ಭಾರಕ್ಕೆ
ಬೀಸುವ ಗಾಳಿಯಲ್ಲಿ
ಸುಗಂಧ ಪಲ್ಲವಿಸಿದಂತೆ
ಹಾಗೇ ತೆರೆದಿಟ್ಟ
ಕಿಟಿಕಿ,ಬಾಗಿಲು
ಹೇಳಲಿಲ್ಲ, ಕೇಳಲಿಲ್ಲ
ಒಳಗೆ ಇಟ್ಟಾಗಿದೆ ಹೆಜ್ಜೆ
ಇನ್ನೂ ಸ್ವಲ್ಪ ಹೊತ್ತು
ಇರಬಾರದೇ ಹೀಗೆ....?!
ಇಂದ: ಪ್ರಭಕರ ತಾಮ್ರಗೌರಿ, ಗೋಕರ್ಣ




ಕಾರ್ತಿಕದ ಬೆಳಕು

07 December 2010, 20:00:00 | PRABHAKAR TAMRAGOURI



ದೀಪ ಹಚ್ಚಬೇಕು

ಅದು ಬೆಳಗಿ ಒಳಗಿನೊಳಗೆ

ಕತ್ತಲ ಬಸಿರೊಡೆದು

ಸ್ಪಷ್ಟವಾಗಬೇಕು ಒಳಗಿನೊಳಗು !


ಮೂಲೆ ಮೂಲೆಗೂ

ಕಿರಣಗಳು ತೂರಿ

ಬೆಳಗುತಿರಲಿ ನಿನ್ನ

ಕಣ್ಣುಗಳ ಹಾಗೆ

ಅದು ಅರಳುತಿರಲಿ ನಿನ್ನ

ನಗುವಿನ ಹಾಗೆ


ನೂತ ಜೇಡನ ಬಲೆ ತೊಡೆದು

ಕಸ ಗುಡಿಸಿ, ಕಪಾಟಿನ

ಧೂಳು ಝಾಡಿಸಿ

ಹೊತ್ತಗೆಗಳ ಒಪ್ಪವಾಗಿಡಬೇಕು.....


ಹಚ್ಚಿಟ್ಟ ದೀಪದ ಬೆಳಕು

ಅದು ಸುತ್ತಲೂ ವಿಸ್ತರಿಸಲಿ

ನಿನ್ನ ಹೆಜ್ಜೆ ಗುರುತಿನ ಹಾಗೆ

ಕತ್ತಲಿನಿಂದ ಬೆಳಕಿನೆಡೆಗೆ

ಬೆಳಕಿನಿಂದ ಕತ್ತಲಿನೆಡೆಗೆ.....


ಹಚ್ಚಿಟ್ಟ ದೀಪದ ಕೆಳಗೆ

ದೇವರ ಪೀಠದ ಮೇಲೆ

ಗಂಧದಕಡ್ಡಿ ಉರಿದುರಿದು

ಘಮಘಮಿಸಬೇಕು ಸುತ್ತೆಲ್ಲಾ

ಅನುಭವದೊಡನೆ ಅನುಭಾವಬೆರೆತು

ಬೆಳಗಬೇಕು ನೀ ಹಚ್ಚಿಟ್ಟ

ಹಣತೆಯ ಬೆಳಕು

ಈ ನೆಲದ ಬದುಕು

ಕಾರ್ತಿಕದ ರಾತ್ರಿಯಲಿ ದೀಪ ಬೆಳಗಿದಂತೆ

ಮನದಲ್ಲೇ ನಿರಂತರ

ಹಣತೆಯ ಹಚ್ಚುತ್ತಲೇ ಇರು....

Monday, December 6, 2010

prabhakartamragouri: kavana

prabhakartamragouri: kavana: "ಹಗಲುಗನ್ನಡಿ  ಬದುಕಿನ ಅಂತರಾಳದಲ್ಲಿ ಕಳೆದು ಹೋದ ಸುಂದರ ಕನಸುಗಳು ಒಂದೊಂದಾಗಿ ಹೂತುಹೋಗಿವೆ ಹೃದಯದಾಳದ ಮಧುರ ಭಾವನೆಗಳಲ್ಲಿ ನೆನಪಿನಾಳದಲ್ಲಿ ನೆನೆದುಹಾಕಿದ ಕೆಟ್..."

Wednesday, December 1, 2010

kavana

ಹಗಲುಗನ್ನಡಿ 

ಬದುಕಿನ ಅಂತರಾಳದಲ್ಲಿ
ಕಳೆದು ಹೋದ ಸುಂದರ  ಕನಸುಗಳು
ಒಂದೊಂದಾಗಿ  ಹೂತುಹೋಗಿವೆ
   ಹೃದಯದಾಳದ  ಮಧುರ  ಭಾವನೆಗಳಲ್ಲಿ

ನೆನಪಿನಾಳದಲ್ಲಿ ನೆನೆದುಹಾಕಿದ
ಕೆಟ್ಟ ಕನಸುಗಳು
ಮೊಳಕೆಯೊಡೆದಿದೆ  ಒಂದೊಂದಾಗಿ
ಮನಸ್ಸಿನ ಬಿಸಿಯುಸಿರಲ್ಲಿ

   
ಹೃದಯದಾಳದಲ್ಲಿ    ಹೆಪ್ಪುಗಟ್ಟಿದ್ದ
ಪ್ರೀಯಿ, ಪ್ರೇಮಗಳು
ಸಾಲು ಸಾಲಾಗಿ  ಸೋತು ಗೆದ್ದಿದೆ
ವಿರಹದ ನೋವಲ್ಲಿ

ಕನಸಿನಾಳದಲ್ಲಿ ಗರಿಕೆದರಿದ 
ಚಿತ್ರ-ವಿಚಿತ್ರಗಳು 
ಸುಂದರ ಕಲಾಕೃತಿಗಳಾಗಿ 
ಪ್ರತಿಬಿಂಭಿಸಿವೆ ಹಗಲುಗನ್ನಡಿಯಲ್ಲಿ  .  

ಪ್ರಭಾಕರ  ತಾಮ್ರಗೌರಿ , ಗೋಕರ್ಣ