Wednesday, December 26, 2012

ಕ್ಷಮಯಾ ಧರಿತ್ರಿ


ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

Tuesday, December 18, 2012

ಜನಾದೇಶ ಒಳ್ಳೇದು

ದೇಶದ ತುಂಬಾ ಭ್ರಷ್ಟಾಚಾರ ತಲೆ ಎತ್ತಿದೆ. ಎಲ್ಲಾ ಕಡೆ ಭ್ರಷ್ಟರೇ ತುಂಬಿದ್ದಾರೆ. ಇಂತವರಿಂದ ರಾಜಕೀಯ ಸುಧಾರಣೆ ಹೇಗೆ ಸಾಧ್ಯ? ಎಲ್ಲಾ ಸ್ವಾರ್ಥಿಗಳೇ! ದೇಶದ ಬಗ್ಗೆ , ನಾಡಿನ ಜನರ ಬಗ್ಗೆ ಕಾಳಜಿ ವಹಿಸುವವರು ಯಾರು? ಜನಾದೇಶ ಇದ್ದರೆ ಒಳ್ಳೆಯದು. ಆಗಲಾದರೂ ಜನರಿಗೆ ಒಳ್ಳೆದಾಗಬಹುದು. ನಿಮ್ಮ ಅಭಿಪ್ರಾಯ ಏನು?

ಕನ್ನಡಸಿನಿಮಾದ " ಡಬ್ಬಿಂಗ್ ಸಂಸ್ಕತಿ"

ಇತ್ತೀಚೆಗೆ ಬಹಳ ಚರ್ಚಿತ ವಿಷಯ ಎಂತದು ಅಂದ್ರೆ ಕನ್ನಡ ಸಿನಿಮಾದ"ಡಬ್ಬಿಂಗ್ ಸಂಸ್ಕೃತಿ".ಯಾಕಾಗಿ ಹೋರಾಟ ಮಾಡ್ತೋ ಹೇಳಿ
ಗುತ್ತಾಗ್ತಿಲ್ಲೆ. ಬೇರೆ ಬೇರೆ ಭಾಷೆಯಲ್ಲೂ ಸಹ ಒಳ್ಳೊಳ್ಳೆ ಸಾಹಿತಿಗಳು ಎಷ್ಟೋ ಮಂದಿ ಇದ್ದೊ. ಅಂತಹ ಸಾಹಿತಿಗಳ ಕೃತಿಗಳನ್ನ ಬೇರೆ ಬೇರೆ ಭಾಷೆಗೆ ಹಾಗು ಕನ್ನಡಕ್ಕೂ ಕೂಡ ತರ್ಜುಮೆ ಮಾಡಿ ಅಂತಹ ಪುಸ್ತಕಗಳನ್ನ ನಾವು ಓದ್ತೊ. ಅದೇ ರೀತಿ ಬೇರೆ ಭಾಷೆಯಲ್ಲಿರುವ ಒಳ್ಳೊಳ್ಳೆ ಸಿನಿಮಾಗಳನ್ನ ಕನ್ನಡಕ್ಕೆ ಡಬ್ ಮಾಡಿದರೆ ಯಾರಿಗೆ ತೊಂದರೆ ಆಗ್ತು? ನನ್ನ ಮಟ್ಟಿಗೆ ಹೇಳುದಾದ್ರೆ ಅದು ತಪ್ಪು ಹೇಳಿ ನನ್ಗೆ ಅನಿಸ್ತಿಲ್ಲೆ. ಇದರಿಂದ ಕನ್ನಡಕ್ಕೆ ಯಾವ್ದೇ ಪೆಟ್ಟಿಲ್ಲೆ. ನಿಮ್ಗೆ ಯಾರಿಗಾದ್ರುವ ಹಾಗೆ ಅನಸ್ತೋ ಹೇಗೆ? ನಿಮ್ಮ ಅಭಿಪ್ರಾಯ ಎಂತದು? ಡಬ್ಬಿಂಗ್ ಸರಿನ ತಪ್ಪ? ಹೇಳ್ತ್ರಾ.

ಕಲಾಕೃತಿ

ಆ ಬಿಳಿ ಹಾಳೆಯ ಮೇಲೆ
ನನ್ನ ಒಳ ಮನಸ್ಸಿನ
ಭಾವನೆಗಳನ್ನು ಎಳೆ ಎಳೆಯಾಗಿ
ಸ್ಪಷ್ಟವಾಗಿ ಬಿಡಿಸಿಟ್ಟಿರುವೆ
ಮುಖ್ಯವಾಗಿ ಒಂದು ಆಕರ್ಷಕ
ಕೃತಿ ಹೊರಬರಲೆಂದು
ಬೆಳ್ಳಂಬೆಳಗ್ಗೆ ಮೊಡಿಬಂದ
ಸೂರ್ಯನ ಎರಕ ಹೊಯ್ದಿರುವ
ಬಣ್ಣವನ್ನು ಬಳಸಿರುವೆ
ನೂಲು ಸೀರೆಯ
ಆ ವಿನ್ಯಾಸದಲ್ಲಿ
ಪ್ರೀತಿ ಹೀರಿಕೊಳ್ಳಬಲ್ಲ
ನೀಡಬಲ್ಲ್, ಬೆಚ್ಚಗಿಡುವ
ಎಲ್ಲ ಸಾಕ್ಷಿಗಳೂ ಇವೆ
ಆ ಆಕೃತಿಯಲ್ಲಿ ಮೊಡಿಬಂದ
ಹೆಣ್ಣಿನ ಕಣ್ಣುಗಳನ್ನು
ನೀನೊಮ್ಮೆ ಆಳವಾಗಿ
ದಿಟ್ಟಿಸಿದರೆ ಸಾಕು
ಅದು ನಿನಗೋಸ್ಕರವೇ
ಜೀವಿಸಿರುವ ಮೊಡಿಪು ಕಾಣುತ್ತದೆ
ಆದರೆ, ನೀನು
ಅದೊಂದು ಕಲಾಕೃತಿ ಎಂದು
ಮಾತ್ರ ಕೊಂಡು
ನಿನ್ನ ಹವ್ಯಾಸ ತೋರಿಸಲು
ಅದಕ್ಕೆ "ಚೌಕಟ್ಟು" ಹಾಕಿಸಿ
ಅಂದವಾಗಿ ಗೋಡೆಗೆ ತೂಗುಹಾಕಿರುವೆ!

ನಿರೀಕ್ಷೆ.....


ಹೊತ್ತು ನೆತ್ತಿಗೇರುವ ಮುನ್ನ
ಮನೆಯಂಗಳವ ಸಿಂಗರಿಸಿ
ರಂಗವಲ್ಲಿ ಇಟ್ಟು
ಹೊಸಿಲಲ್ಲಿ ಕೂತ ಹುಡುಗಿ
ಕಾಯುತ್ತಾಳೆ...
ಹೊತ್ತಾರೆ ಬರಬೇಕಿದ್ದ
ಹೊಸ ಅತಿಥಿಯಾಗಮನಕ್ಕೆ
ಹಸೆ ಹರಡಿ ಬಾಗಿಲನು ತೆರೆದು

ತೆರೆದು ಬಿದ್ದಿದೆ ರಸ್ತೆ
ಹಗಲಿಗೂ ಅನಾಸ್ತೆ
ಇದ್ದೀತು ತುಳಿದು ಹೋದವರ
ನೆನಪಿನ ಮೆಲುಕು
ಎಲ್ಲಿ ಹೋಯಿತು ರಾತ್ರಿ...?
ಆ ಕಪ್ಪು...; ಆ ಮೌನ...?!

ಎಂದೋ ಬರಬೇಕಿತ್ತು
ಇನ್ನೂ ಬಂದಿಲ್ಲ
ಎಂದು ಬಂದಾನೋ?
ಕಣ್ಣಲ್ಲಿ ನಿರೀಕ್ಷೆ
ಕಾಲದ ಪರೀಕ್ಷೆ!

ಕೇಕೇ ಹಾಕುವ ಕನಸುಗಳ
ಗದ್ದಲದ ನಡುವೆ
ಆಳದಿಂದೆದ್ದ ನೋವಿನ ಕೂಗು
ಎದೆಯೊಳಕ್ಕೆ ಬಂದು
ಕದ್ದು ಆಲಿಸುತ್ತಳೆ
ಹೆಜ್ಜೆಗಳ ಸದ್ದು...

ಇಲ್ಲ, ಬಂದಿಲ್ಲ
ಕುಣಿದು ದಣಿದ ಕನಸುಗಳಿಗೆ
ಕಣ್ಣೀರ ತಿನಿಸು ಉಣಿಸುತ್ತ
ನಿರೀಕ್ಷಿಸುತ್ತಾಳೆ ಹುಡುಗಿ.....

ಸ್ಮೃತಿ ಪಟಲದೊಳಗೆ

ಮಂಜು ಮುಸುಕಿದ ಮುಂಜಾವಿನಲಿ
ಬೆಳಕು ಚಿತ್ತಾರ
ಇನ್ನೂ ಮೂಡಿರದ ಸಮಯ
ಕೊರಳ ಇಂಪು
ಇನ್ನು ಹೊರಡುವಾಗಲೇ
ಅರಳು ಮರಳು
ಸ್ಮೃತಿಪಟಲದೊಳಗೆ ಎಲ್ಲಾ ಖಾಲಿ ಖಾಲಿ
ಎಲ್ಲಾ ಕಳಕೊಂಡವರಂತೆ ಬಟಾಬಯಲು

ಚಿಗುರಿ ಅರಳುವ ಮುನ್ನ
ಅರಳಿದ ನೋಟ
ಚೈತ್ರ ಚೈತ್ರಗಳು ಕಳೆದುಹೋದರೂ
ಎಲ್ಲೋ ನೋಡಿದ ನೆನಪು!
ಖಾಲಿ ಹಾಳೆಯ ತುಂಬಾ
ಗುರುತು ಸಿಗದ
ಖಾಲಿ ನೋಟಗಳು
ವಸಂತ ಸರಿದು ಹೋಗುತ್ತಿದೆ
ಬದುಕು ಕೂಡಾ ಸರಿದು ಹೋಗುತ್ತಿದೆ
ಆದರೆ,
ಇತಿಹಾಸದ ಬೇರುಗಳು
ಬೇರುಬಿಟ್ಟಿರುತ್ತವೆ ಗಟ್ಟಿಯಾಗಿ ಸ್ಮೃತಿಪಟಲದೊಳಗೆ.....

ನಗುವ ಮಲ್ಲಿಗೆಘಮ್ಮೆಂದು
ಅರಳುವ ಪಾರಿಜಾತದ ಹೂವು
ಪಟಪಟನೆ ಉದುರುವ ಮಾತಿನ
ಸ್ವಾತಿ ಮಳೆ ಹನಿಯೇ?
ಕ್ಷಣಿಕ.....
ಯೋಚನೆಯ ಸುಳಿಯಲ್ಲಿ
ಕರಗಿ ಹೋಗುತ್ತದೆ
ನೆನಪಿನಾಳದ ಸ್ಮೃತಿಪಟಲದೊಳಗೆ.......

ಮನಸು ತುಂಬಿಕೊಂಡರೆ.....

ಗೋಡೆಗಳ ಒಳಗೆ
ಗೋಡೆಗಳಾಚೆ ಹೊರಗೆ
ಕೈ, ಕಣ್ಣುಗಳಿಗೆ
ತೆರೆದು ಬಿದ್ದಿದೆ
ಬಯಲು ಆಗಸ!
ಎಷ್ಟೊಂದು ಪದಗಳು ಒಳ ಹೊರಗೆ
ತುಂಬಿಕೊಳ್ಳಲು ಮನಸು

ಕೈಗೆಟುಕುವುದು ಕಂಗಳಿಗೆ ಬೇಡ
ಕಣ್ಣುಗಳಿಗೆ ಕಂಡಿದ್ದು
ಕೈಗೆ ನಿಲುಕದು
ಅತ್ತಿತ್ತ ಹುಡುಕುವ
ಕೈ ಕಣ್ಣುಗಳಿಗೆ
ಹೃದಯ ಕದ ತೆರೆಯದು
ಅದರ ಬಡಿತವೇ ಬೇರೆ!

ಬಳ್ಳಿ ಬಾಡದಹಾಗೆ ನೋಡಿಕೊಳ್ಳುವ
ಲಯದ ಬಾಳೊಮ್ಮೆ
ಭಾವದ ಆಘಾತಕ್ಕೆ
ಲಯ ತಪ್ಪಿಸಿ ನಿಂತರೆ....
ಬಳ್ಳಿ ಬೇರು ಕಿತ್ತಂತೆ!
ಹಾಗಾಗದಂತೆ,
ಕಂಗಳು ಹೊರಡುವ ವೇಗದೊಂದಿಗೆ
ಕೈ ಸ್ಪರ್ಧೆಗಿಳಿಯದೆ
ಅಡಗಿರುವ ಮನಸಿನ ಓಟಕ್ಕೂ
ಕೈ ಜೋಡಿಸದೆ ಇದ್ದು
ಮನಸು ತುಂಬಿಕೊಂಡರೆ
ಉದ್ದಾಗದಿದ್ದರೂ ಕೈ, ಕಾಲು
ರೆಕ್ಕೆ ಮೂಡಿ ನನಸಾಗುವುದು
ಕನಸು ಪುಟ್ಟ ಗೂಡೊಳಗೇ..!

ಹೊಸ ಕ್ರಾಂತಿ



ಮದುವೆ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವಂತಹ ಮೊದಲ ಚಿತ್ರಣ ಅದ್ದೂರಿತನ. ದೊಡ್ಡ ದೊಡ್ಡ ಪೆಂಡಾಲುಗಳು, ವಾದ್ಯ,
ಭರ್ಜರಿಜನಸಂದಣಿ ಇವೇ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು.ದೊಡ್ಡ ದೊಡ್ಡ ಶ್ರೀಮಂತರ, ರಾಜಕಾರಣಿಗಳ, ಸಿನಿಮಾ ನಟರ ಮದುವೆ ಎಂದರೆ ಕೇಳುವುದೇ ಬೇಡ! ಮದುವೆಗಳಂತಹ ಸಮಾರಂಭಗಳಲ್ಲಿ ನಮ್ಮ ಆಸಕ್ತಿ ಹಾಗೂ ಇಷ್ಟಗಳ ಬದಲು ಮತ್ತೊಬ್ಬರ ಆಸೆಗಳನ್ನು ಪ
ೂರೈಸುವ ಬಿಜಿಯಲ್ಲಿಯೇ ಎಲ್ಲರೂ ಮುಳುಗಿಬಿಡುತ್ತಾರೆ.ದೇಶದಲ್ಲಿ ಒಂದು ಹೊತ್ತಿನ ಊಟಕ್ಕು ಗತಿ ಇಲ್ಲದೇ ಪ್ರಾಣ ಬಿಡುವ ಲಕ್ಷಗಟ್ಟಲೆ ಮಂದಿ ಇರುವಾಗ ಇಂತಹ ಅದ್ದೂರಿ, ಆಡಂಬರದ ಮದುವೆ ಇಂದಿನ ದಿನಗಳಲ್ಲಿ ಅವಷ್ಯವೇ? ಅದರಲ್ಲೂ ಈಗಂತು ಎಲ್ಲವೂ ತುಟ್ಟಿಕಾಲ. ಆದ್ದರಿಂದ ಅದ್ದೂರಿ ಮದುವೆ, ದುಬಾರಿ ವೆಚ್ಚದ ಮದುವೆಯ ಬದಲಾಗಿ ಅದ್ದೂರಿಯಲ್ಲದ, ದುಬಾರಿಯಲ್ಲದ ಸಿಂಪಲ್ ಮದುವೆಯಾಗಿ ಪರಿವರ್ತನೆಯಾಗಬೇಕು. ಆಗ ಮಾತ್ರ ಮನಗಳಿಗೂ ಶಾಂತಿ, ದೇಶದಲ್ಲೂ ಹೊಸ ಕ್ರಾಂತಿ ಉಂಟಾಗಬಹುದು. ..! ನಿಮ್ಮ ಅನಿಸಿಕೆ ಏನು?

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಆಗಸದ ಒಡಲ ಮುತ್ತಿದ್ದ
ಕಪ್ಪು ಮೋಡದ ಅಳಲು
ಕರಗಿ ಬೆಳ್ಳಿ ದೀಪದ ಮಿಂಚು
ಮೂಡಿದ ಬೆಳಕಲ್ಲಿ ಹನಿ ಹನಿ ನೀರು
ಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವ
ಬೀಳುಬಿಟ್ಟ ಬೇರುಗಳು ಸೆಟೆಗೊಂಡು
ಮತ್ತೆ ಮಣ್ಣನ್ನು ಅವಚುತ್ತಾ
ಗಟ್ಟಿಯಾಗುತ್ತಲೇ ನಿಧಾನ......
ಹಳದಿ ಎಲೆಗಳ ಮರದ ತುಂಬೆಲ್ಲಾ
ಹಸಿರು ನೆತ್ತರ ಸಂಚಾರ
ಮುತ್ತಿನ ಮಣಿ ಎರಚಿದಂತೆ
ಹುಲ್ಲು ದಳಗಳ ಮೇಲೆಲ್ಲಾ
ಹನಿ ಮುತ್ತುಗಳ ಇಂಚರ
ಮುಗಿಲ ಮುತ್ತಿನ ಮಣಿಗಳ
ಆಲಿಕಲ್ಲು ಕರಗಿ ನೀರಾಗುವ ಮುನ್ನ
ಪೋಣಿಸಿ ಮುಡಿವ ಆತುರ
ಎಲ್ಲ ಕೊಳೆಯ ಕೊಚ್ಚಿಹೋದ
ಸ್ವಚ್ಛ ದಾರಿಯುದ್ದಕ್ಕೂ ಮೂಡಿದ
ಇವನ ಹೆಜ್ಜೆ ಗುರುತು ನಿಚ್ಚಳ!
ಮುಖ ತೊಳೆದೆದ್ದ ಇವಳೆದೆಯ ತುಂಬಾ
ಬರೀ ಮಳೆಯದೇ ಸಪ್ಪಳ
ನೀರ ಹನಿಸಿ, ಉಸಿರ ಮುಡಿಸಿ
ಕಣ್ಣ ಪಾಪೆಯಲ್ಲಿ, ಹಸಿರು ತೇವವಿರಿಸಿ
ಅತಿಥಿ ಮಳೆ ನೇಪಥ್ಯ ಸರಿದಾಗ
ಒದ್ದೆ ಮಣ್ಣಿನ ತುಂಬಾ
ಚುಕ್ಕೆ ಚಿತ್ತಾರ
ಹೂಬಿಟ್ಟ ಗಿಡದ ತುಂಬೆಲ್ಲಾ
ನವಿಲು ವಯ್ಯಾರ!

Thursday, December 13, 2012

ಶಾಂತಿ ಸ್ಥಾಪನೆಯಲ್ಲಿ ಧರ್ಮದ ಪಾತ್ರ

ಧರ್ಮವು ಮಾನವನ ಉನ್ನತಿಗೆ ಅತ್ಯವಶ್ಯವಾದುದು. ಶೃತಿಯಲ್ಲಿ’ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ’ ಎಂದಿದೆ. ಅಂದರೆ ಜಗತ್ತಿಗೆ ಧರ್ಮವು ಆಧಾರವಾಗಿದೆ ಎಂದರ್ಥ.’ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ ವಾಕ್ಯ ದಂತೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುವುದೆಂದೂ, ನಾವು ಅದನ್ನು ಹಾಳುಮಾಡಿದರೆ ಅದು ನಮ್ಮನ್ನು ಹಾಳು ಮಾಡುವುದೆಂದೂ ಅದರ ತಾತ್ಪರ್ಯ. ಹೀಗೆ ಧರ್ಮವು ಜಗತ್ತಿನ ಆಧಾರ ಸ್ವರೂಪವಾಗಿರುವುದರಿಂದ ನಮಗೆ ನಮ್ಮ ಸುಸ್ಥಿತಿಯ ಅಶೆಯಿದ್ದರೆ ನಾವು ಅದನ್ನು ಊರ್ಜಿತಗೊಳಿಸಿ ಇಟ್ಟುಕೊಂಡಿರಬೇಕು.

’ಧರ್ಮದಿಂದ ಮನುಷ್ಯತ್ವ’
------------------------
ಮನುಷ್ಯ ಜನ್ಮ ಎಂದು ಬಂತೋ ಅಂದೇ ಧರ್ಮವು ಗಂಟುಬಿತ್ತೆಂದು ಹೇಳಬೇಕು.ಉಳಿದ ಯಾವ ಪ್ರಣಿಗೂ ಬುದ್ಧಿ ಇಲ್ಲ.ಅದ್ದರಿಂದ ಅವುಗಳಿಗೆ ಧರ್ಮದ ಬಂಧನವಿಲ್ಲ. ಮನುಷ್ಯನೊಬ್ಬನೇ ಬುದ್ಧಿಯುಳ್ಳ ಪ್ರಾಣಿ.ಆದ್ದರಿಂದ ಅವನು ಧರ್ಮದಂತೆ ನಡೆಯುವುದಕ್ಕೆ ಬದ್ಧನಾಗಿದ್ದಾನೆ. ಬುದ್ಧಿ ಎಂಬುದು ವಿವೇಕ ಶಕ್ತಿ. ವಿವೇಕ ಶಕ್ತಿ ಇಲ್ಲದ ಕಡೆ ಧರ್ಮದ ಬಂಧನವಿಲ್ಲ ಮನುಷ್ಯನಿಗೆ ಅದು ಇರುವುದರಿಂದ ಆತ ಧರ್ಮಕ್ಕೆ ಬದ್ಧನಾಗಿದ್ದಾನೆ. ಹೀಗಿದ್ದರೂ ಕೂಡ ಯಾರಾದರೂ ಧರ್ಮದ ಕಟ್ಟನ್ನು ಮೀರಿ ನಡೆದರೆ ಅವನು ಮನುಷ್ಯನಾದರೂ ಪಶುವೇ! ಏಕೆಂದರೆ ’ಧರ್ಮೋ ಹಿ ತೇಷಾಮಧಿಕೋವಿಶೇಷಃ’  ಧರ್ಮವೊಂದು ಹೆಚ್ಚಿಗೆ ಇರುವುದೇ ಅವನ ಮನುಷ್ಯತ್ವ. ಇದೇ ಅವನ ಉನ್ನತಿಗೆ ಕಾರಣ. ಮನುಷ್ಯನು ಧರ್ಮವನ್ನು ಆಚರಿಸುವುದಕ್ಕೆ ಬದ್ಧನಾದಮೇಲೆ ಧರ್ಮ ಅಧರ್ಮ ಎರಡನ್ನೂ ತಿಳಿದುಕೊಂಡು ಅಧರ್ಮದಿಂದ ಹಿಮ್ಮೆಟ್ಟಿ ಧರ್ಮದ ಕಡೆ ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಮಾನವನಿಗೆ ಧರ್ಮವೆಂಬುದು ಉನ್ನತಿಗೆ ಸಹಾಯ ಮಾಡುವ  ಬದಲು ಅಧೋಗತಿಗೆ ಕಾರಣವಾಗಿರುವುದು ಅವ್ಯಕ್ತವಾಗಿ ಗೋಚರಿಸುವುದನ್ನು ನೋಡಿದರೆ ಮನಸ್ಸಿಗೆ ತುಂಬ ಖೇದವೆನಿಸುತ್ತದೆ.

ಈಗಿನ ಧರ್ಮಾನುಯಾಯಿಗಳಿಗೆ ನಮ್ಮೆಲ್ಲ ಧರ್ಮಗಳ ಕುರಿತು ಮುಕ್ತವಾದ ಮನಸ್ಸಿನಿಂದ ವಿಚಾರ ಚರ್ಚೆ ಮಾಡುವಷ್ಟು ಪುರಸೊತ್ತು ತಾಳ್ಮೆ ಇದ್ದಂತಿಲ್ಲ. ಹಿಂದು ಮುಂದಿನ ವಿಚಾರವಿಲ್ಲದೇ ತಮ್ಮ ಧರ್ಮ ಶ್ರೇಷ್ಠವಾದದ್ದು ಇತರ ಧರ್ಮ ಅರ್ಥಹೀನವಾದದ್ದು ಎಂಬ ಭಾವನೆ ಬೇರೂರಿಬಿಟ್ಟಿದೆ. ಮನುಕುಲವನ್ನು ವಿನಾಶದ ಕಡೆ ನೂಕುತ್ತಿರುವಂತೆ ಭಾಸವಾಗುತ್ತಿದೆ. ಧರ್ಮ ,ಧರ್ಮದಿಂದ ಶಾಂತಿ ಸ್ಥಾಪನೆಯಾಗುವ ಬದಲು ಅಶಾಂತಿ ಸ್ಥಾಪನೆಯಾಗುತ್ತಿದೆಯೇನೋ ಎಂದೆನಿಸತೊಡಗಿದೆ. ಎಲ್ಲ ಧರ್ಮಗಳೂ ಒಂದೇ ! ಎಲ್ಲ ಧರ್ಮಗಳ ಮೂಲ ಉದ್ದೇಶ ಒಂದೇ!ಅದು ಬಿಟ್ಟು ಯಾರಧರ್ಮ ಹೆಚ್ಚು ಅಥವಾ ಶ್ರೇಷ್ಠ ಎಂದು ವಿಚಾರಿಸುವುದು ಮೊರ್ಖತನವೆನಿಸುತ್ತದೆ.ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠವಾಗಿರುತ್ತದೆ.
’ಹಿಂದುಸ್ಥಾನವು ಧರ್ಮದ ಜನ್ಮ ಭೂಮಿ”
------------------------------------
ಈ ಧರ್ಮವು ನಮ್ಮ ದೇಶಕ್ಕೆ ಮಾತ್ರವೇ ಅವಷ್ಯವೆಂದಲ್ಲ  ಇದು ಜಗತ್ತಿಗೆಲ್ಲ ಬೇಕಾಗಿರುವುದು.ಜಗತ್ತಿನಲ್ಲಿ ಎಲ್ಲಿ ಧರ್ಮ ವಿಚಾರವು ಎಷ್ಟೆಷ್ಟು ಜಾಗರೂಕವಾಗಿರುವುದೋ ಅಲ್ಲಲ್ಲಿ ಅಷ್ಟಷ್ಟು ಸುಸ್ಥಿತಿಯು ನೆಲೆಗೊಂಡಿರುವುದು. ಜಗತ್ತಿನ ಸುಸ್ಥಿತಿಯು ಧರ್ಮ ವಿಚಾರವನ್ನು ಇಷ್ಟು ಪೂರ್ಣವಾಗಿ ಅವಲಂಬಿಸಿಕೊಂಡಿದ್ದರೂ ಕೂಡ ಉಳಿದ ಯಾವ ದೇಶಗಳಿಗೂಇದರ ಜನ್ಮ ಭೂಮಿಯಾಗುವ ಸುಯೋಗವು ಲಭಿಸಲಿಲ್ಲ. ಧರ್ಮ ವಿಚಾರಕ್ಕೆ ನಮ್ಮ ಭಾರತ ಭೂಮಿಯೇ ತವರೂರು. ಜಗತ್ತಿನಲ್ಲಿ ಎಷ್ಟೆಷ್ಟು ಬಗೆಯ ಧರ್ಮ ಪಂಥಗಳಿವೆಯೋ ಅವುಗಳ ತತ್ವಗಳೆಲ್ಲ ಬಹುಮಟ್ಟಿಗೆ ಹಿಂದುಸ್ಥಾನದಲ್ಲಿ ಹುಟ್ಟಿದವುಗಳೇ ಆಗಿರುತ್ತವೆ.ಚೈನಾ,ಗ್ರೀಸ್ ಪರ್ಷಿಯಾ ಮೊದಲಾದ ಎಲ್ಲ ದೇಶಗಳಲ್ಲಿರುವ ಧರ್ಮ ಧ್ವನಿಯು ಇಲ್ಲಿಂದ ಹೊರಟು ಹರಿದದ್ದಾಗಿದೆ.ಆದ್ದರಿಂದ ಅಖಂಡ ಭೂಮಂಡಲವು ಈದೃಷ್ಟಿಯಿಂದ ನಮ್ಮ ದೇಶಕ್ಕೆ ಋಣಿಯಾಗಿದೆ. ಸ್ವಾಮಿ ರಾಮತೀರ್ಥರು; ಸ್ವಾಮಿ ವಿವೇಕಾನಂದರು ಮೊದಲಾದವರು ಪಶ್ಚಿಮದಲ್ಲೆಲ್ಲ ಗುಡುಗಾಡಿ ಹಿಂದೂ ಧರ್ಮದ ಜಯಧ್ವನಿಯನ್ನು ಜಗತ್ತಿನಲ್ಲೆಲ್ಲ ತುಂಬಿರುವರು.
’ಧರ್ಮ ಶ್ರದ್ದೆಯು ಹಿಂದುಸ್ಥಾನದವರ ಹುಟ್ಟುಗುಣ’
-----------------------------------------
ಧರ್ಮವು ತನ್ನ ಜನ್ಮ  ದೇಶದ ಪ್ರತಿಯೊಂದು ಕಣದಲ್ಲಿಯೂ ವ್ಯಾಪಿಸಿಕೊಂಡಿರುವುದೆಂದು ತೋರುತ್ತದೆ. ಆದ್ದರಿಂದ ಇಲ್ಲಿ ಹುಟ್ಟಿದ ಜನರಿಗೆಲ್ಲ ಧರ್ಮದ ಶ್ರದ್ದೆಯು ಹುಟ್ಟುಗುಣವಾಗಿ ಬಂದಿರುವುದೆಂದು ಹೇಳಬಹುದು. ಉಳಿದ ದೇಶದಲ್ಲಿ ಲೌಕಿಕ ಸಂಪತ್ತಿಗೆ ಬೆಲೆ ಜಾಸ್ತಿ. ನಮ್ಮಲ್ಲಿ ಧಾರ್ಮಿಕ ಸಂಪತ್ತಿಗೆ ಬೆಲೆ ಹೆಚ್ಚು! ಜಗತ್ತಿನ ಮುಂದೆ ನಮ್ಮ ದೇಶಕ್ಕೇನಾದರೂ ಹೆಚ್ಚಿನ ಬೆಲೆಯಿದ್ದರೆ  ಅದು ಧರ್ಮದಿಂದಲೇ!! ಧರ್ಮವೊಂದಿದ್ದರೆ ಸರ್ವವೂ ಇದ್ದಂತೆಯೆಂದೂ ಧರ್ಮವೊಂದು ಹೋದರೆ ಸರ್ವನಾಶವಾಯಿತೆಂದೂ ಅಷ್ಟೇ ಏಕೆ? ಆತ್ಮ ನಾಶವೇ ಆದಂತೆಯೇ ಎಂದೂ ನಮ್ಮ ದೇಶದವರ ಭಾವನೆಯಿರುವುದು. ಆದ್ದರಿಂದ ಇಲ್ಲಿಯ ಜನರಿಗೆ ಧರ್ಮವನ್ನು ಕಳೆದುಕೊಳ್ಳುವುದು ಎಂದರೆ ಆಗದ ಮಾತು. ಪ್ರತಿನಿತ್ಯ ಪತ್ರಿಕೆ ತಿರುವಿ ನೋಡಿದರೆ ಎಲ್ಲಿ ನೋಡಿದರಲ್ಲಿ ಮೋಸ , ವಂಚನೆ.ಕೊಲೆ ಸುಲಿಗೆ, ಲೂಟಿ ಜಗಳ ಇತ್ಯಾದಿ.....ನೋಡಿದಾಗ ಸಮಾಜದಲ್ಲಿ ಶಾಂತಿ ಎನ್ನುವುದು ಮಾಯವಾಗಿದೆ ಎಂದೆನಿಸುತ್ತದೆ.ಧರ್ಮ ಅಧೋಗತಿಯತ್ತ ಸಾಗುತ್ತಿದೆ. ಧರ್ಮ ಎಲ್ಲಿರುವುದೋ ಅಲ್ಲಿ ಶಾಂತಿ ಇರುತ್ತದೆ.ಎಲ್ಲಿ ಧರ್ಮ ಇಲ್ಲವೋ ಅಲ್ಲಿ ಶಾಂತಿಯ ಬದಲು ಅಶಾಂತಿ ತುಂಬಿರುತ್ತದೆ. ಜಗತ್ತಿನಲ್ಲಿ ಶಾಂತಿಯಿರಬೇಕಾದರೆ ಧರ್ಮ ಅನಿವಾರ್ಯ! ಧರ್ಮ ಯಾವುದೇ ಆಗಿರಲಿ ಸರ್ವಧರ್ಮಗಳೂ ನಮಗೆ ಒಳಿತನ್ನು ಮಾಡುತ್ತವೆ..... ಎಂದು ನಂಬಿ ನಿಷ್ಠೆಯಿಂದ ನಮ್ಮ ಧರ್ಮವನ್ನು  ನಾವು ಆಚರಿಸಿದರೆ  ನಮ್ಮನ್ನು ಖಂಡಿತವಾಗಿಯೂ ಶಾಂತಿಯೆಡೆಗೆ ಕೊಂಡೊಯ್ಯುತ್ತದೆ.

ನಮ್ಮ ಭವಿಷ್ಯ ಸುಂದರವಾಗಿರಬೇಕಾದರೆ ಶಾಂತಿ ಬೇಕೇ ಬೇಕು. ಅದಕ್ಕಾಗಿ ಮಾನವನಲ್ಲಿ ಧರ್ಮದ ಮೂಲಕ  ಶಾಂತಿ ಉದಯವಾಗಬೇಕು. ಶಾಂತಿ ಉದಯವಾಯಿತೆಂದರೆ ದ್ವೇಷಾಸೂಯೆ ಇರುವುದಿಲ್ಲ. ತನ್ನಿಂದ ತಾನೇ ಮಾಯವಾಗುತ್ತದೆ. ದ್ವೇಷವು ಕಡಿಮೆಯಾಯಿತೆಂದರೆ ಪ್ರೀತಿ ಹುಟ್ಟುತ್ತದೆ. ಪ್ರೀತಿಯಿಂದ  ಸೇವ ಮನೋಭಾವ  ಹುಟ್ಟುವುದು. ಇದಕ್ಕೆ ಶಾಂತಿಯೇ ಪ್ರಚೋದನ ಶಕ್ತಿ! ಎಲ್ಲಾ ಧರ್ಮಗಳ ಮೂಲ ಸಾರ ಶಾಂತಿಯೇ ಆಗಿದೆ. ಯಾವುದೇ ಧರ್ಮಗಳಾಗಲಿ, ಧರ್ಮಸಂಸ್ಥೆಗಳಾಗಲಿ, ಧರ್ಮಸಂಸ್ಥಾಪಕರಾಗಲಿ, ದೇಶೋದ್ಧಾರಕರಗಲಿ ಎಲ್ಲರೂ ಶಾಂತಿಯನ್ನೇ ಆರಿಸಿಕೊಂಡಿದ್ದಾರೆ. ಶಾಂತಿಯ ಮೇಲೆ ಸರ್ವ ಧರ್ಮಗಳು ನಿಂತಿವೆ. ಆದರೆ ವಿಪರ್ಯಾಸವೆಂದರೆ ಕೆಲ ಧರ್ಮಾನುಯಾಯಿಗಳು ಧರ್ಮದ ಹೆಸರಿನಲ್ಲಿ ಅಪಚಾರ ಮಾಡಿ ಅಶಾಂತಿ ಮೂಡಿಸಿ ಲಾಭ ಪಡೆಯುತ್ತಿದ್ದಾರೆ. ದುಃಖದ ವಿಚಾರವೆಂದರೆ ದಾರಿ ದೀಪಗಳಾಗಿ ದಾರಿ ತೋರಿಸಬೇಕಾಗಿದ್ದ ನಮ್ಮ ಕೆಲ ವಿದ್ಯಾವಂತ ಮುಖಂಡರೇ ಧರ್ಮದ ಹೆಸರಿನಲ್ಲಿ  ದಾರಿ ತಪ್ಪಿಸುತ್ತದ್ದಾರೆ. ಮನುಷ್ಯರಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ.

ಇದರಿಂದಾಗಿ ಧರ್ಮದ ಮೂಲವಾದ ಶಾಂತಿಯು ಮಾಯವಾಗುತ್ತಿದೆ. ಅಶಾಂತಿ ತಲೆದೋರಿದೆ. ಸೌಹಾರ್ದ ಭಾವನೆ ಕಡಿಮೆಯಾಗಿ ದ್ವೇಷಾಸೂಯೆ ಹೆಚ್ಚತೊಡಗಿದೆ.ಧರ್ಮಾಂಧತೆಯು ಬೆಳೆದು ಜಾತಿ ದ್ವೇಷದ ಕಿಚ್ಚು ಹೆಚ್ಚಿತ್ತಿದೆ.ಇಂಥ ಪರಿಸ್ಥಿತಿಯಲ್ಲೂ ಕೆಲವೇ ಮಂದಿ ಸಮಾಜ ಸೇವಕರು ಆದಷ್ಟು ಮಟ್ಟಿಗಾದರೂ ಅಶಾಂತಿ ತಪ್ಪಿಸಿ ಶಾಂತಿ ನೆಲೆಸುವಂತೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅಧರ್ಮಗಳ ನಡುವೆ ಶಾಂತಿಯ  ಮಾತು ಯಾರು ಕೇಳಬೇಕು? ಶಾಂತಿಯೇ ಧರ್ಮದ ಮೂಲವು ಎಂದು ತಿಳಿದು ಧರ್ಮವನ್ನು ಆಚರಿಸಿದರೆ ಸಮಾಜದಲ್ಲಿ ಸುಖ-ಶಾಂತಿಯು ತಾನಾಗಿಯೇ ಬಂದು ನೆಲೆಸುವುದು.’ ಸುಖಂ ತು ನ ವಿನ ಧರ್ಮಾತ್ತಸ್ಮಾದ್ಧರ್ಮ ಪರೋಭವೇತ್ ’ಅಂದರೆ ಸುಖವೆಂಬುದು ಧರ್ಮದ ಹೊರತು ಬೇರೆ ಯಾವುದರಿಂದಲೂ ಸಿಕ್ಕುವುದಿಲ್ಲ. ಆದ್ದರಿಂದ ಎಲ್ಲರೂ ಧರ್ಮಪರರಾಗಿರಬೇಕು. ಮಾನವನ ಬಾಳು ಕಲಹದಿಂದ ಮುಕ್ತವಾಗಿ ಶಾಂತಿಯ ನೆಮ್ಮದಿಯ ನೆಲೆಯಾಗುವುದು ಸತ್ಯ! ಧರ್ಮದ ಇಂತಹ ನೈಜ ಆದರ್ಶವನ್ನು ಎಲ್ಲರೂ ಅರಿತು ಬಾಳುವಂತಾದರೆ ಈ ಜಗತ್ತು ಎಂತಹ ಸುಂದರ ತಾಣವಾಗಬಲ್ಲದಲ್ಲವೇ? ನಾವೆಲ್ಲರೂ ಅಂತಹ ಸಮಾಜದ ಬದುಕಿಗಾಗಿ ಕಾಯೋಣವೇ?



Sunday, November 25, 2012

ಚಳಿಗಾಲದ ಬಿಸಿಲು


ಗರಿಗೆದರಿ ನಿಂತ ಭಾವನೆಗಳು
ಪುಟಿದೇಳುತ್ತವೆ ಅಂತರಾಳದಲ್ಲಿ
ಹೊಸ ಕನಸುಗಳ ಕಾಣುತ್ತ
ಸಾಗರದಾಚೆ ಕಂಡ ಬಾನಲ್ಲಿ
ಇಳಿಬಿದ್ದ  ಸೂರ್ಯ ನಗುತ್ತಾನೆ
ಮುಂಗಾರಿನ ಮಳೆಹನಿ ಕಂಡು
ಕಾದ ತೊಯ್ದ ಹನಿಗಳ ಸಾಲು
ಎಳೆ ಮರಿಯ ನೋಯಿಸಿದ
ಇಬ್ಬನಿ ತುಂಬಿದ ಹಸಿರು
ಕಂಪಿಸುತ್ತದೆ ಚಳಿಗಾಲದ ಬಿಸಿಲಿಗೆ
ನಗುಮೊಗದ ಚಲುವೆಯ
ನೋಟಗಳ ಸವಿಯಲ್ಲಿ
ಇರುಳು ಸರಿಯುತ್ತದೆ
ತೋಳುಗಳ ಬಳಸುತ್ತಾ
ಕಾಡುವ ನೆನಪುಗಳು
ಗೆಳತಿಯ ಬರುವಿಕೆಗಾಗಿ
ಮಾಗಿ ಸಾಗಿದೆ
ಬತ್ತಲೆ ಕನಸುಗಳ ಮೆಟ್ಟಿ
ಗೋರಿಯ ಮೇಲಿನ ಹಾಡು
ಎದೆ ತಟ್ಟಿ ಬಿಗಿಯುತ್ತಾ
ನೂರೆಂಟು ಬಯಕೆಗಳು
ಎದೆಯಾಳದಲ್ಲಿ ಬಿರಿಯುತ್ತವೆ
ಕಡಲ ಮೇಲಿನ ಗಾಳಿ
ತೋಯಿಸಿದ ಬಟ್ಟೆ ತೆಳುವು
ತರುಣಿಯ ಎದೆಮಟ್ಟ
ಬೆಳೆದು ನಿಂತ ಹೂಬಳ್ಳಿ
ತೋಟದಲ್ಲಿ ಸದಾ ಬೆಳಗು

Monday, October 29, 2012

prabhakartamragouri: ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

prabhakartamragouri: ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ:  ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತ...

ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆನಿಂತಿದೆ

 ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ

ಅಂದು ರಾಷ್ತ್ರೀಯ ಭಾವನೆ ಸಮಾಜದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿತ್ತು. ಬದುಕಿನಲ್ಲಿ ಒಂದು ಆದರ್ಶವಿತ್ತು. ನೀತಿ, ಮೌಲ್ಯ, ಚಾರಿತ್ರ್ಯರಹಿತ ಬದುಕು ಬದುಕಲ್ಲ ಎಂಬ ಎಚ್ಚರಿಕೆ ಇತ್ತು. ಆದರೀಗ ಪಾಶ್ಚಾತ್ಯ ಅಂಧಾನುಕರಣೆ, ಸಗಟು ಮತಗಳಿಗಾಗಿ ತುಷ್ಟ್ಟೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಭಜನಕಾರಿ ರಾಜಕೀಯ, ಭೋಗವಾದದಿಂದಾಗಿ ಸಮಾಜದಲ್ಲಿ ಅಶಾಂತಿ, ಅನೈತಿಕತೆ, ಸ್ವಾರ್ಥ ವಿಜೃಂಭಿಸುವಂತಾಗಿದೆ.

         ’ಪ್ರಗತಿಪರ ಬಳಕೆ ಸಿದ್ದಾಂತ’ ಪ್ರತಿಪಾದಕ ಡಾ. ರವಿ ಭಾತ್ರಾ ಹೇಳುವಂತೆ, ದೇಶದಲ್ಲಿ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲಾ ರೀತಿಯ ಸಂಪತ್ತೂ ಇದೆ. ಆದರೆ ಆಧ್ಯಾತ್ಮ ರಹಿತವಾಗಿ ಭೋಗಪ್ರಧಾನ ಭೌತಿಕವಾದದಿಂದ ಜನಜೀವನ ಉಸುಕಿನ ಮೇಲೆ ಕಟ್ಟಿದ ಕಟ್ಟಡದಂತಾಗಿಬಿಟ್ಟಿದೆ.
     
       ಈ ದೇಶದ ತಳಪಾಯ ಆಧ್ಯಾತ್ಮಿಕ ಚಿಂತನೆಯ ಮೇಲೆ ನಿಂತಿದೆ. ಇದು ಭೋಗಭೂಮಿಯಲ್ಲ, ತ್ಯಾಗ ಭೂಮಿ. ಇಂದು ವಿವ್ಯುನ್ಮಾನ ಮಾಧ್ಯಮ, ಚಲನಚಿತ್ರ, ಶಿಕ್ಷಣ, ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿ ಅನೈತಿಕತೆಯೇ ವಿಜೃಂಭಿಸುತ್ತಿದೆ.

     ಅಹಂ ಬಿಟ್ಟುಬಿಡೋಣ ಪರಂಪರಾಗತವಾಗಿ ಬಂದಿರುವ ಸಂಪ್ರದಾಯ, ರಿವಾಜುಗಳು ಮನೆಯೊಳಗಿರಲಿ. ಸಂಸ್ಕಾರದಲ್ಲಿ ಯೋಗ್ಯ ಹಿಂದುವಾಗಿರೋಣ, ರಾಷ್ಟ್ರೀಯತೆಯಲ್ಲಿ ಭಾರತೀಯರಾಗಿರೋಣ! ಎಲ್ಲರೊಂದಿಗೆ ಬೆರೆಯುವಾಗ ವಿಶ್ವಮಾನವನಾಗಿರೋಣ.

Sunday, October 28, 2012

ಆಧ್ಯಾತ್ಮಿಕ ಪರಂಪರೆ

ಆಧ್ಯಾತ್ಮಿಕ  ಪರಂಪರೆ

 ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎನ್ನುವುದು ನಿಜವಾದರೂ, ನಿಯಂತ್ರಣ ಅಸಾಧ್ಯವೇನಲ್ಲ. ನಮ್ಮದು ಸ್ವಭಾವತಃ ಧರ್ಮಿಕ, ಆಧ್ಯಾತ್ಮಿಕ ಚಿಂತನೆಯ  ದೇಶ. ಈ ದೇಶವನ್ನು ಆಳಿದ  ರಾಜ ಮಹಾರಾಜರು, ಆಧ್ಯಾತ್ಮಿಕ ಚಿಂತಕರನ್ನು ಗುರುವಾಗಿ ಸ್ವೀಕರಿಸಿದ ಪರಂಪರೆ ನಮ್ಮದು. ಶ್ರೀರಾಮನಿಗೆ ವಸಿಷ್ಠರು, ಶಿವಾಜಿಗೆ ರಾಮದಾಸರು, ಹುಕ್ಕಬುಕ್ಕರಿಗೆ ವಿದ್ಯಾರಣ್ಣರು- ಹೀಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧಕರು ದೇಶಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಧರ್ಮದ ನೆಲೆಯಲ್ಲಿ  ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಪವಿತ್ರ ಪರಂಪರೆ ಇಲ್ಲಿಯದು.

                  ಹೀಗಿದ್ರೂ  ಭ್ರಷ್ಟಾಚಾರದಲ್ಲಿ ದೇಶ ಮುಂಚೂಣಿಯಲ್ಲಿರುವುದು ದುರದೃಷ್ಟಕರ. ಆಧ್ಯಾತ್ಮದ ಕಡಗಣನೆಯೇ ಇದಕ್ಕೆ ಕಾರಣ. ಶಿಕ್ಷಣ ಕ್ಷೇತ್ರದಲ್ಲಿ ಆಧ್ಯಾತ್ಮ ಎಂದರೆ ಕಮ್ಯುನಲ್ ಎನ್ನುವ ಕೆಟ್ಟ ಚಿಂತನೆಗಳು ನಮ್ಮ ಜನಪ್ರತಿನಿಧಿಗಳಲ್ಲಿ ಹುಟ್ಟಿದ್ದೇ ಅನಾಹುತಗಳಿಗೆ ಕಾರಣ. ಭ್ರಷ್ಟಾಚಾರವು ಮಹಾ ಪಾಪ ಎನ್ನುವ ತಿಳಿವಳಿಕೆ ಬರಬೇಕು. ಧರ್ಮ ಗುರುಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು.