Thursday, December 13, 2012

ಶಾಂತಿ ಸ್ಥಾಪನೆಯಲ್ಲಿ ಧರ್ಮದ ಪಾತ್ರ

ಧರ್ಮವು ಮಾನವನ ಉನ್ನತಿಗೆ ಅತ್ಯವಶ್ಯವಾದುದು. ಶೃತಿಯಲ್ಲಿ’ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ’ ಎಂದಿದೆ. ಅಂದರೆ ಜಗತ್ತಿಗೆ ಧರ್ಮವು ಆಧಾರವಾಗಿದೆ ಎಂದರ್ಥ.’ಧರ್ಮ ಏವ ಹತೋ ಹಂತಿ, ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಸಂಸ್ಕೃತ ವಾಕ್ಯ ದಂತೆ ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುವುದೆಂದೂ, ನಾವು ಅದನ್ನು ಹಾಳುಮಾಡಿದರೆ ಅದು ನಮ್ಮನ್ನು ಹಾಳು ಮಾಡುವುದೆಂದೂ ಅದರ ತಾತ್ಪರ್ಯ. ಹೀಗೆ ಧರ್ಮವು ಜಗತ್ತಿನ ಆಧಾರ ಸ್ವರೂಪವಾಗಿರುವುದರಿಂದ ನಮಗೆ ನಮ್ಮ ಸುಸ್ಥಿತಿಯ ಅಶೆಯಿದ್ದರೆ ನಾವು ಅದನ್ನು ಊರ್ಜಿತಗೊಳಿಸಿ ಇಟ್ಟುಕೊಂಡಿರಬೇಕು.

’ಧರ್ಮದಿಂದ ಮನುಷ್ಯತ್ವ’
------------------------
ಮನುಷ್ಯ ಜನ್ಮ ಎಂದು ಬಂತೋ ಅಂದೇ ಧರ್ಮವು ಗಂಟುಬಿತ್ತೆಂದು ಹೇಳಬೇಕು.ಉಳಿದ ಯಾವ ಪ್ರಣಿಗೂ ಬುದ್ಧಿ ಇಲ್ಲ.ಅದ್ದರಿಂದ ಅವುಗಳಿಗೆ ಧರ್ಮದ ಬಂಧನವಿಲ್ಲ. ಮನುಷ್ಯನೊಬ್ಬನೇ ಬುದ್ಧಿಯುಳ್ಳ ಪ್ರಾಣಿ.ಆದ್ದರಿಂದ ಅವನು ಧರ್ಮದಂತೆ ನಡೆಯುವುದಕ್ಕೆ ಬದ್ಧನಾಗಿದ್ದಾನೆ. ಬುದ್ಧಿ ಎಂಬುದು ವಿವೇಕ ಶಕ್ತಿ. ವಿವೇಕ ಶಕ್ತಿ ಇಲ್ಲದ ಕಡೆ ಧರ್ಮದ ಬಂಧನವಿಲ್ಲ ಮನುಷ್ಯನಿಗೆ ಅದು ಇರುವುದರಿಂದ ಆತ ಧರ್ಮಕ್ಕೆ ಬದ್ಧನಾಗಿದ್ದಾನೆ. ಹೀಗಿದ್ದರೂ ಕೂಡ ಯಾರಾದರೂ ಧರ್ಮದ ಕಟ್ಟನ್ನು ಮೀರಿ ನಡೆದರೆ ಅವನು ಮನುಷ್ಯನಾದರೂ ಪಶುವೇ! ಏಕೆಂದರೆ ’ಧರ್ಮೋ ಹಿ ತೇಷಾಮಧಿಕೋವಿಶೇಷಃ’  ಧರ್ಮವೊಂದು ಹೆಚ್ಚಿಗೆ ಇರುವುದೇ ಅವನ ಮನುಷ್ಯತ್ವ. ಇದೇ ಅವನ ಉನ್ನತಿಗೆ ಕಾರಣ. ಮನುಷ್ಯನು ಧರ್ಮವನ್ನು ಆಚರಿಸುವುದಕ್ಕೆ ಬದ್ಧನಾದಮೇಲೆ ಧರ್ಮ ಅಧರ್ಮ ಎರಡನ್ನೂ ತಿಳಿದುಕೊಂಡು ಅಧರ್ಮದಿಂದ ಹಿಮ್ಮೆಟ್ಟಿ ಧರ್ಮದ ಕಡೆ ಗಮನ ಕೊಡಬೇಕು. ಇತ್ತೀಚಿನ ದಿನಗಳಲ್ಲಿ ಮಾನವನಿಗೆ ಧರ್ಮವೆಂಬುದು ಉನ್ನತಿಗೆ ಸಹಾಯ ಮಾಡುವ  ಬದಲು ಅಧೋಗತಿಗೆ ಕಾರಣವಾಗಿರುವುದು ಅವ್ಯಕ್ತವಾಗಿ ಗೋಚರಿಸುವುದನ್ನು ನೋಡಿದರೆ ಮನಸ್ಸಿಗೆ ತುಂಬ ಖೇದವೆನಿಸುತ್ತದೆ.

ಈಗಿನ ಧರ್ಮಾನುಯಾಯಿಗಳಿಗೆ ನಮ್ಮೆಲ್ಲ ಧರ್ಮಗಳ ಕುರಿತು ಮುಕ್ತವಾದ ಮನಸ್ಸಿನಿಂದ ವಿಚಾರ ಚರ್ಚೆ ಮಾಡುವಷ್ಟು ಪುರಸೊತ್ತು ತಾಳ್ಮೆ ಇದ್ದಂತಿಲ್ಲ. ಹಿಂದು ಮುಂದಿನ ವಿಚಾರವಿಲ್ಲದೇ ತಮ್ಮ ಧರ್ಮ ಶ್ರೇಷ್ಠವಾದದ್ದು ಇತರ ಧರ್ಮ ಅರ್ಥಹೀನವಾದದ್ದು ಎಂಬ ಭಾವನೆ ಬೇರೂರಿಬಿಟ್ಟಿದೆ. ಮನುಕುಲವನ್ನು ವಿನಾಶದ ಕಡೆ ನೂಕುತ್ತಿರುವಂತೆ ಭಾಸವಾಗುತ್ತಿದೆ. ಧರ್ಮ ,ಧರ್ಮದಿಂದ ಶಾಂತಿ ಸ್ಥಾಪನೆಯಾಗುವ ಬದಲು ಅಶಾಂತಿ ಸ್ಥಾಪನೆಯಾಗುತ್ತಿದೆಯೇನೋ ಎಂದೆನಿಸತೊಡಗಿದೆ. ಎಲ್ಲ ಧರ್ಮಗಳೂ ಒಂದೇ ! ಎಲ್ಲ ಧರ್ಮಗಳ ಮೂಲ ಉದ್ದೇಶ ಒಂದೇ!ಅದು ಬಿಟ್ಟು ಯಾರಧರ್ಮ ಹೆಚ್ಚು ಅಥವಾ ಶ್ರೇಷ್ಠ ಎಂದು ವಿಚಾರಿಸುವುದು ಮೊರ್ಖತನವೆನಿಸುತ್ತದೆ.ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠವಾಗಿರುತ್ತದೆ.
’ಹಿಂದುಸ್ಥಾನವು ಧರ್ಮದ ಜನ್ಮ ಭೂಮಿ”
------------------------------------
ಈ ಧರ್ಮವು ನಮ್ಮ ದೇಶಕ್ಕೆ ಮಾತ್ರವೇ ಅವಷ್ಯವೆಂದಲ್ಲ  ಇದು ಜಗತ್ತಿಗೆಲ್ಲ ಬೇಕಾಗಿರುವುದು.ಜಗತ್ತಿನಲ್ಲಿ ಎಲ್ಲಿ ಧರ್ಮ ವಿಚಾರವು ಎಷ್ಟೆಷ್ಟು ಜಾಗರೂಕವಾಗಿರುವುದೋ ಅಲ್ಲಲ್ಲಿ ಅಷ್ಟಷ್ಟು ಸುಸ್ಥಿತಿಯು ನೆಲೆಗೊಂಡಿರುವುದು. ಜಗತ್ತಿನ ಸುಸ್ಥಿತಿಯು ಧರ್ಮ ವಿಚಾರವನ್ನು ಇಷ್ಟು ಪೂರ್ಣವಾಗಿ ಅವಲಂಬಿಸಿಕೊಂಡಿದ್ದರೂ ಕೂಡ ಉಳಿದ ಯಾವ ದೇಶಗಳಿಗೂಇದರ ಜನ್ಮ ಭೂಮಿಯಾಗುವ ಸುಯೋಗವು ಲಭಿಸಲಿಲ್ಲ. ಧರ್ಮ ವಿಚಾರಕ್ಕೆ ನಮ್ಮ ಭಾರತ ಭೂಮಿಯೇ ತವರೂರು. ಜಗತ್ತಿನಲ್ಲಿ ಎಷ್ಟೆಷ್ಟು ಬಗೆಯ ಧರ್ಮ ಪಂಥಗಳಿವೆಯೋ ಅವುಗಳ ತತ್ವಗಳೆಲ್ಲ ಬಹುಮಟ್ಟಿಗೆ ಹಿಂದುಸ್ಥಾನದಲ್ಲಿ ಹುಟ್ಟಿದವುಗಳೇ ಆಗಿರುತ್ತವೆ.ಚೈನಾ,ಗ್ರೀಸ್ ಪರ್ಷಿಯಾ ಮೊದಲಾದ ಎಲ್ಲ ದೇಶಗಳಲ್ಲಿರುವ ಧರ್ಮ ಧ್ವನಿಯು ಇಲ್ಲಿಂದ ಹೊರಟು ಹರಿದದ್ದಾಗಿದೆ.ಆದ್ದರಿಂದ ಅಖಂಡ ಭೂಮಂಡಲವು ಈದೃಷ್ಟಿಯಿಂದ ನಮ್ಮ ದೇಶಕ್ಕೆ ಋಣಿಯಾಗಿದೆ. ಸ್ವಾಮಿ ರಾಮತೀರ್ಥರು; ಸ್ವಾಮಿ ವಿವೇಕಾನಂದರು ಮೊದಲಾದವರು ಪಶ್ಚಿಮದಲ್ಲೆಲ್ಲ ಗುಡುಗಾಡಿ ಹಿಂದೂ ಧರ್ಮದ ಜಯಧ್ವನಿಯನ್ನು ಜಗತ್ತಿನಲ್ಲೆಲ್ಲ ತುಂಬಿರುವರು.
’ಧರ್ಮ ಶ್ರದ್ದೆಯು ಹಿಂದುಸ್ಥಾನದವರ ಹುಟ್ಟುಗುಣ’
-----------------------------------------
ಧರ್ಮವು ತನ್ನ ಜನ್ಮ  ದೇಶದ ಪ್ರತಿಯೊಂದು ಕಣದಲ್ಲಿಯೂ ವ್ಯಾಪಿಸಿಕೊಂಡಿರುವುದೆಂದು ತೋರುತ್ತದೆ. ಆದ್ದರಿಂದ ಇಲ್ಲಿ ಹುಟ್ಟಿದ ಜನರಿಗೆಲ್ಲ ಧರ್ಮದ ಶ್ರದ್ದೆಯು ಹುಟ್ಟುಗುಣವಾಗಿ ಬಂದಿರುವುದೆಂದು ಹೇಳಬಹುದು. ಉಳಿದ ದೇಶದಲ್ಲಿ ಲೌಕಿಕ ಸಂಪತ್ತಿಗೆ ಬೆಲೆ ಜಾಸ್ತಿ. ನಮ್ಮಲ್ಲಿ ಧಾರ್ಮಿಕ ಸಂಪತ್ತಿಗೆ ಬೆಲೆ ಹೆಚ್ಚು! ಜಗತ್ತಿನ ಮುಂದೆ ನಮ್ಮ ದೇಶಕ್ಕೇನಾದರೂ ಹೆಚ್ಚಿನ ಬೆಲೆಯಿದ್ದರೆ  ಅದು ಧರ್ಮದಿಂದಲೇ!! ಧರ್ಮವೊಂದಿದ್ದರೆ ಸರ್ವವೂ ಇದ್ದಂತೆಯೆಂದೂ ಧರ್ಮವೊಂದು ಹೋದರೆ ಸರ್ವನಾಶವಾಯಿತೆಂದೂ ಅಷ್ಟೇ ಏಕೆ? ಆತ್ಮ ನಾಶವೇ ಆದಂತೆಯೇ ಎಂದೂ ನಮ್ಮ ದೇಶದವರ ಭಾವನೆಯಿರುವುದು. ಆದ್ದರಿಂದ ಇಲ್ಲಿಯ ಜನರಿಗೆ ಧರ್ಮವನ್ನು ಕಳೆದುಕೊಳ್ಳುವುದು ಎಂದರೆ ಆಗದ ಮಾತು. ಪ್ರತಿನಿತ್ಯ ಪತ್ರಿಕೆ ತಿರುವಿ ನೋಡಿದರೆ ಎಲ್ಲಿ ನೋಡಿದರಲ್ಲಿ ಮೋಸ , ವಂಚನೆ.ಕೊಲೆ ಸುಲಿಗೆ, ಲೂಟಿ ಜಗಳ ಇತ್ಯಾದಿ.....ನೋಡಿದಾಗ ಸಮಾಜದಲ್ಲಿ ಶಾಂತಿ ಎನ್ನುವುದು ಮಾಯವಾಗಿದೆ ಎಂದೆನಿಸುತ್ತದೆ.ಧರ್ಮ ಅಧೋಗತಿಯತ್ತ ಸಾಗುತ್ತಿದೆ. ಧರ್ಮ ಎಲ್ಲಿರುವುದೋ ಅಲ್ಲಿ ಶಾಂತಿ ಇರುತ್ತದೆ.ಎಲ್ಲಿ ಧರ್ಮ ಇಲ್ಲವೋ ಅಲ್ಲಿ ಶಾಂತಿಯ ಬದಲು ಅಶಾಂತಿ ತುಂಬಿರುತ್ತದೆ. ಜಗತ್ತಿನಲ್ಲಿ ಶಾಂತಿಯಿರಬೇಕಾದರೆ ಧರ್ಮ ಅನಿವಾರ್ಯ! ಧರ್ಮ ಯಾವುದೇ ಆಗಿರಲಿ ಸರ್ವಧರ್ಮಗಳೂ ನಮಗೆ ಒಳಿತನ್ನು ಮಾಡುತ್ತವೆ..... ಎಂದು ನಂಬಿ ನಿಷ್ಠೆಯಿಂದ ನಮ್ಮ ಧರ್ಮವನ್ನು  ನಾವು ಆಚರಿಸಿದರೆ  ನಮ್ಮನ್ನು ಖಂಡಿತವಾಗಿಯೂ ಶಾಂತಿಯೆಡೆಗೆ ಕೊಂಡೊಯ್ಯುತ್ತದೆ.

ನಮ್ಮ ಭವಿಷ್ಯ ಸುಂದರವಾಗಿರಬೇಕಾದರೆ ಶಾಂತಿ ಬೇಕೇ ಬೇಕು. ಅದಕ್ಕಾಗಿ ಮಾನವನಲ್ಲಿ ಧರ್ಮದ ಮೂಲಕ  ಶಾಂತಿ ಉದಯವಾಗಬೇಕು. ಶಾಂತಿ ಉದಯವಾಯಿತೆಂದರೆ ದ್ವೇಷಾಸೂಯೆ ಇರುವುದಿಲ್ಲ. ತನ್ನಿಂದ ತಾನೇ ಮಾಯವಾಗುತ್ತದೆ. ದ್ವೇಷವು ಕಡಿಮೆಯಾಯಿತೆಂದರೆ ಪ್ರೀತಿ ಹುಟ್ಟುತ್ತದೆ. ಪ್ರೀತಿಯಿಂದ  ಸೇವ ಮನೋಭಾವ  ಹುಟ್ಟುವುದು. ಇದಕ್ಕೆ ಶಾಂತಿಯೇ ಪ್ರಚೋದನ ಶಕ್ತಿ! ಎಲ್ಲಾ ಧರ್ಮಗಳ ಮೂಲ ಸಾರ ಶಾಂತಿಯೇ ಆಗಿದೆ. ಯಾವುದೇ ಧರ್ಮಗಳಾಗಲಿ, ಧರ್ಮಸಂಸ್ಥೆಗಳಾಗಲಿ, ಧರ್ಮಸಂಸ್ಥಾಪಕರಾಗಲಿ, ದೇಶೋದ್ಧಾರಕರಗಲಿ ಎಲ್ಲರೂ ಶಾಂತಿಯನ್ನೇ ಆರಿಸಿಕೊಂಡಿದ್ದಾರೆ. ಶಾಂತಿಯ ಮೇಲೆ ಸರ್ವ ಧರ್ಮಗಳು ನಿಂತಿವೆ. ಆದರೆ ವಿಪರ್ಯಾಸವೆಂದರೆ ಕೆಲ ಧರ್ಮಾನುಯಾಯಿಗಳು ಧರ್ಮದ ಹೆಸರಿನಲ್ಲಿ ಅಪಚಾರ ಮಾಡಿ ಅಶಾಂತಿ ಮೂಡಿಸಿ ಲಾಭ ಪಡೆಯುತ್ತಿದ್ದಾರೆ. ದುಃಖದ ವಿಚಾರವೆಂದರೆ ದಾರಿ ದೀಪಗಳಾಗಿ ದಾರಿ ತೋರಿಸಬೇಕಾಗಿದ್ದ ನಮ್ಮ ಕೆಲ ವಿದ್ಯಾವಂತ ಮುಖಂಡರೇ ಧರ್ಮದ ಹೆಸರಿನಲ್ಲಿ  ದಾರಿ ತಪ್ಪಿಸುತ್ತದ್ದಾರೆ. ಮನುಷ್ಯರಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ.

ಇದರಿಂದಾಗಿ ಧರ್ಮದ ಮೂಲವಾದ ಶಾಂತಿಯು ಮಾಯವಾಗುತ್ತಿದೆ. ಅಶಾಂತಿ ತಲೆದೋರಿದೆ. ಸೌಹಾರ್ದ ಭಾವನೆ ಕಡಿಮೆಯಾಗಿ ದ್ವೇಷಾಸೂಯೆ ಹೆಚ್ಚತೊಡಗಿದೆ.ಧರ್ಮಾಂಧತೆಯು ಬೆಳೆದು ಜಾತಿ ದ್ವೇಷದ ಕಿಚ್ಚು ಹೆಚ್ಚಿತ್ತಿದೆ.ಇಂಥ ಪರಿಸ್ಥಿತಿಯಲ್ಲೂ ಕೆಲವೇ ಮಂದಿ ಸಮಾಜ ಸೇವಕರು ಆದಷ್ಟು ಮಟ್ಟಿಗಾದರೂ ಅಶಾಂತಿ ತಪ್ಪಿಸಿ ಶಾಂತಿ ನೆಲೆಸುವಂತೆ ಪ್ರಯತ್ನಿಸುತ್ತಿದ್ದಾರೆ. ಆದರೆ ಅಧರ್ಮಗಳ ನಡುವೆ ಶಾಂತಿಯ  ಮಾತು ಯಾರು ಕೇಳಬೇಕು? ಶಾಂತಿಯೇ ಧರ್ಮದ ಮೂಲವು ಎಂದು ತಿಳಿದು ಧರ್ಮವನ್ನು ಆಚರಿಸಿದರೆ ಸಮಾಜದಲ್ಲಿ ಸುಖ-ಶಾಂತಿಯು ತಾನಾಗಿಯೇ ಬಂದು ನೆಲೆಸುವುದು.’ ಸುಖಂ ತು ನ ವಿನ ಧರ್ಮಾತ್ತಸ್ಮಾದ್ಧರ್ಮ ಪರೋಭವೇತ್ ’ಅಂದರೆ ಸುಖವೆಂಬುದು ಧರ್ಮದ ಹೊರತು ಬೇರೆ ಯಾವುದರಿಂದಲೂ ಸಿಕ್ಕುವುದಿಲ್ಲ. ಆದ್ದರಿಂದ ಎಲ್ಲರೂ ಧರ್ಮಪರರಾಗಿರಬೇಕು. ಮಾನವನ ಬಾಳು ಕಲಹದಿಂದ ಮುಕ್ತವಾಗಿ ಶಾಂತಿಯ ನೆಮ್ಮದಿಯ ನೆಲೆಯಾಗುವುದು ಸತ್ಯ! ಧರ್ಮದ ಇಂತಹ ನೈಜ ಆದರ್ಶವನ್ನು ಎಲ್ಲರೂ ಅರಿತು ಬಾಳುವಂತಾದರೆ ಈ ಜಗತ್ತು ಎಂತಹ ಸುಂದರ ತಾಣವಾಗಬಲ್ಲದಲ್ಲವೇ? ನಾವೆಲ್ಲರೂ ಅಂತಹ ಸಮಾಜದ ಬದುಕಿಗಾಗಿ ಕಾಯೋಣವೇ?



No comments:

Post a Comment