Tuesday, December 18, 2012

ಒದ್ದೆ ಮಣ್ಣಿನ ತುಂಬಾ ಚುಕ್ಕೆ ಚಿತ್ತಾರ

ಆಗಸದ ಒಡಲ ಮುತ್ತಿದ್ದ
ಕಪ್ಪು ಮೋಡದ ಅಳಲು
ಕರಗಿ ಬೆಳ್ಳಿ ದೀಪದ ಮಿಂಚು
ಮೂಡಿದ ಬೆಳಕಲ್ಲಿ ಹನಿ ಹನಿ ನೀರು
ಮೇಲೆ ನೀಲ ಪರದೆಯಲ್ಲಿ ನೀರ ತೇರಿನುತ್ಸವ
ಬೀಳುಬಿಟ್ಟ ಬೇರುಗಳು ಸೆಟೆಗೊಂಡು
ಮತ್ತೆ ಮಣ್ಣನ್ನು ಅವಚುತ್ತಾ
ಗಟ್ಟಿಯಾಗುತ್ತಲೇ ನಿಧಾನ......
ಹಳದಿ ಎಲೆಗಳ ಮರದ ತುಂಬೆಲ್ಲಾ
ಹಸಿರು ನೆತ್ತರ ಸಂಚಾರ
ಮುತ್ತಿನ ಮಣಿ ಎರಚಿದಂತೆ
ಹುಲ್ಲು ದಳಗಳ ಮೇಲೆಲ್ಲಾ
ಹನಿ ಮುತ್ತುಗಳ ಇಂಚರ
ಮುಗಿಲ ಮುತ್ತಿನ ಮಣಿಗಳ
ಆಲಿಕಲ್ಲು ಕರಗಿ ನೀರಾಗುವ ಮುನ್ನ
ಪೋಣಿಸಿ ಮುಡಿವ ಆತುರ
ಎಲ್ಲ ಕೊಳೆಯ ಕೊಚ್ಚಿಹೋದ
ಸ್ವಚ್ಛ ದಾರಿಯುದ್ದಕ್ಕೂ ಮೂಡಿದ
ಇವನ ಹೆಜ್ಜೆ ಗುರುತು ನಿಚ್ಚಳ!
ಮುಖ ತೊಳೆದೆದ್ದ ಇವಳೆದೆಯ ತುಂಬಾ
ಬರೀ ಮಳೆಯದೇ ಸಪ್ಪಳ
ನೀರ ಹನಿಸಿ, ಉಸಿರ ಮುಡಿಸಿ
ಕಣ್ಣ ಪಾಪೆಯಲ್ಲಿ, ಹಸಿರು ತೇವವಿರಿಸಿ
ಅತಿಥಿ ಮಳೆ ನೇಪಥ್ಯ ಸರಿದಾಗ
ಒದ್ದೆ ಮಣ್ಣಿನ ತುಂಬಾ
ಚುಕ್ಕೆ ಚಿತ್ತಾರ
ಹೂಬಿಟ್ಟ ಗಿಡದ ತುಂಬೆಲ್ಲಾ
ನವಿಲು ವಯ್ಯಾರ!

No comments:

Post a Comment