Monday, April 15, 2013

ತೈಲ ನಿಕ್ಷೇಪ


ವರುಷ ಕಳೆದದ್ದು
ಗೊತ್ತಾಗಲೇ ಇಲ್ಲ
ನಿರರ್ಥಕವಾಗಿ ಕಳೆದದ್ದು
ಈಗ ಲಕ್ಷಕ್ಕೆ ಬಂತು
ದೇಹಕ್ಕಾಯಿತು ವಯಸ್ಸು
ಮನಸ್ಸಿನ್ನೂ ಎಳಸು
ಉತ್ಸವದಲ್ಲಿ ಪಾಲ್ಗೊಂಡ
ರಂಗು ರಂಗಿನ ಗಾಳಿಪಟಗಳ ಹಾರಾಟ
ಬಣ್ಣ ಬಣ್ಣದ ಕನಸಿನೊಡೆ
ಮನದ ತುಂಬ
ಇಂದು ಅರಿವಿಗೆ ಬಂತು
ಕೆಲಸಗಳು ನೂರೆಂಟು
ನಡು ನೀರಿನಲ್ಲಿ , ದಡ ದೂರದಲ್ಲಿ
ಹಾಡು ಇನ್ನೂ ಪಲ್ಲವಿ
ಬರೆಯಬೇಕಾಗಿದೆ ನುಡಿಗಳ
ನೂರು ಭಾವ ಬಿತ್ತಿ
ಮೂಡಿದೆ ಬರಿಯ ಹಂದರ
ತುಂಬಬೇಕಿದೆ ಅದರೊಳಗೆ ಜೀವನ
ಸೂರ್ಯ ರಶ್ಮಿಯ ಬಣ್ಣಗಳ
ಜೀವ ಜೀವಗಳ
ಎದೆಯ ಬಾಗಿಲ ತಟ್ಟಿ
ಸುರಿಸಬೇಕಿದೆ ಪ್ರೀತಿಯ
ಕ್ರಮಿಸಬೇಕಿದೆ ಮೈಲು ದೂರ
ದೃಷ್ಟಿ ನೆಟ್ಟಿದೆ ದೂರದಲಿ
ಹೆಜ್ಜೆ ದಣಿದಿದೆ ಸೋತು
ಇಂದು ಅರಿವಿಗೆ ಬಂತು
ಎಣ್ಣೆ ಹನಿದಿದೆ
ಮರಳು ಸೋರಿದೆ
ಹುಡುಕುತಿದೆ ಮನಸು
ಕಡಲ ದಂಡೆಯಲ್ಲೊಂದು
ತೈಲ ನಿಕ್ಷೇಪ...!

Thursday, April 11, 2013

ಭಾವನೆಗೂ ಮೀರಿದ ಮಾತು...!

ಚುಮು ಚುಮು ಮುಂಜಾವಿನ
ಬೇಲಿ ಬದಿಯ ಹೂಗಳ ಮೇಲೆ
ಬಿದ್ದ ಮಂಜು ಹನಿಗೆ
ಅವಿತಿಟ್ಟುಕೊಳ್ಳಲಾಗದ ತೀಕ್ಷ್ಣ ಅನುಭವ
ನಾಳೆಗಳ ನಿರೀಕ್ಷೆಯಲ್ಲಿ ಬದುಕು ಸವೆಸುವ
ಕಣ್ಣಿನಾಳದ ಭಾವನೆಗೂ ಮೀರಿದ
ಮೌನ ಮಾತು

ಫುಟ್ ಪಾತ್ ನ ಮೇಲೆ ಬದುಕು ಸವೆಸುವ
ಹೂತುಂಬಿದ ಬುಟ್ಟಿ ಹೊತ್ತು ಮಾರುವ
ಹರಿದ ಬಟ್ಟೆ ತೊಟ್ಟ
ಹುಡುಗಿಯ ಬಯಲಾಟ
ಅಂತರಾಳದಲ್ಲೇನೋ ಹುಡುಕಾಟ
ಹರಿದ ಚಿಂದಿ ಬಟ್ಟೆಯ ಒಳಗಿನ ದನಿ
ಬೆಳಕಿಗೆ ಕರಗಿದ ಇಬ್ಬನಿ
ಭವಿಷ್ಯದ ಕಾತರತೆಯ ಕಣ್ಣಭಾವ
ತೆರೆಗೆ ಸರಿದ ಇರುಳಿನಲ್ಲಿ
ಹದಿ ಹರೆಯ ಕಾಮಕ್ಕೆ ತುತ್ತಾದ
ಹುಡುಗಿಯ ನಾಡಿನಿಡಿತದ ಏರಿಳಿತದಲ್ಲಿ
ಉತ್ತರಿಸಲಾಗದ ಪ್ರಶ್ನೆ
ಎದುರಿಸಬೇಕಾದ ಗಳಿಗೆ
ಸಾಯಲೇ..? ಬದುಕಲೇ..?
ಎನ್ನುವ ದ್ವಂದ್ವದಲ್ಲಿ
ಜಾರಿದ ಕಣ್ಣ ಹನಿಗಳು...

ಇಳೆಮುಗಿಲ ಸಂಬಂಧ
ಇಳೆಗೆ ಇಳಿದ ಮಳೆಯ ಅನುಬಂಧ
ಹಸಿರಲ್ಲೊಮ್ಮೆ ಉಕ್ಕಿದ ರಸ
ಕೋಗಿಲೆಯ ಇಂಚರಕ್ಕೆ ವಸಂತನ ಸರಸ
ಸೃಷ್ಟಿಯಲ್ಲಿ ಅರ್ಥವಾಗದ
ಅನನ್ಯ ಚೇತನ ನಿತ್ಯನೂತನ
ಭಾವನೆಗೂ ಮೀರಿದ ಮಾತು...!

Wednesday, April 10, 2013

ಚೈತ್ರದಲಿ


ಮೂಡಣದ ಮರೆಯಲ್ಲಿ
ಹೊಂಬೆಳಕ ಮಳೆಯಲ್ಲಿ
ಭಾಸ್ಕರನ ಯುಗರಶ್ಮಿಗಳು
ಚೈತ್ರ ಬಟ್ಟೆಯ ತೊಟ್ಟು
ಜಗದ ಪದತಲದಾಚೆ ಮೈ ಚೆಲ್ಲಿದೆ.

ಹರುಷದ ಹಸಿರು
ಕೊಂಬೆಗಳನ್ನಪ್ಪಿ ಬಂದಾಗ
ಆಕಾಶದೆತ್ತರದ ಬಯಕೆಗಳ ಕನಸುಗಳು
ಚಿಲಿಪಿಲಿಸಿ ರೆಕ್ಕೆ ಚಾಮರ ಬೀಸಿ
ಮುಗುಳು ನಗೆ ಸೂಸಿ
ನಗೆ ಬಟ್ಟಲೊಳಗೆ ಚುಂಚು ತೂರಿ
ಹೀರಿಕೊಳ್ಳುತ್ತವೆ ದಕ್ಕಿದಷ್ಟು ಹಾಲು...!

ಬಾನೆದೆಯ ಅಂಗಳದ
ಬಿರಿದ ನಕ್ಷತ್ರ ಮೊಗ್ಗಿನ ಹಂಬಲಕೆ
ಹಾರಿ ಹೊರಳುತ್ತವೆ
ಮಾಮರದ ಕೊಂಬೆಯಲಿ
ಮಲ್ಲಿಗೆಯ ಲತೆಯಲ್ಲಿ
ದುಂಬಿಗಳ ಝೇಂಕಾರ
ಕೋಗಿಲೆಗಳಾಲಾಪ ಸವಿಯುತ್ತಾ
ಸೃಷ್ಟಿ ಸುಧೆ ತಲೆದೂಗಿದೆ.

ಯುಗಾದಿಯ ಶುಭ ಚೈತ್ರದಲಿ
ಅಜ್ನಾತದ ಆಳಕ್ಕೆ ಬೇರುಗಳು ಬಿಟ್ಟು
ನೆಲಕಚ್ಚಿ ನಿಂತ ಗಿಡದ ಹಸಿರೊಡಲಲ್ಲಿ
ಮೊಗ್ಗರಳಿ ಹೂವಾಗಿ
ಬಂದ ಬಿರುಗಾಳಿ
ಚಳಿ ಮಳೆಯನುಂಡು
ಹುದುಗಿದ್ದ ಭೂರಮೆಯ
ಸುಂದರ ಕವಿತೆಗಳು ಬಿರಿಯುತ್ತವೆ...!!

ಅರುಣೋದಯ

ಏಳು ,ಎದ್ದೇಳು
ನಿದ್ದೆಗಣ್ಣನು ತೆರೆದೊಮ್ಮೆ ನೋಡು
ಹೊಸ ಶತಮಾನದ
ಅರುಣೋದಯವಾಗಿದೆ ಇಂದು...!

ಮೂಡಣದಲ್ಲಿ ಉಷೆ
ಮೂಡಿ ಬರುತಿಹಳು
ಕೆಂಬಣ್ಣದ ಓಕುಳಿಯ ಚೆಲ್ಲಿ
ಹೂಬನಗಳೆಲ್ಲಾ
ಕಾದು ನಿಂತಿಹವು ಇಂದು
ರಂಗು ರಂಗಿನ ಉಡುಗೆಯಲ್ಲಿ

ಹಕ್ಕಿಗಳೆಲ್ಲ ಹಾಡುತಿಹವು
ಸುಪ್ರಭಾತ ಇನಿದನಿಯಲಿಂದು
ಪುಷ್ಪವೃಷ್ಟಿಗೈಯುತಿಹವು ತರುಲತೆಗಳೆಲ್ಲ
ತಲೆಬಾಗಿ ನಿಂದು
ಕಾಲನ ಪಯಣದಲಿ
ಹೊಸ ಹೆಜ್ಜೆಯ ಪ್ರಾರಂಭ
ಮಾತು ಮಾತಿಗೆ ನಿಲುಕದ
ಸೃಷ್ಟಿಯ ಸೊಬಗಿನ ಸಂಭ್ರಮ..!
ಚರಾಚರಗಳಲ್ಲಿ ಹರ್ಷದ
ಹೊನಲುಕ್ಕಿ ಹರಿಯಲಿ
ಹೊಸ ವರ್ಷದ ಆಗಮನ
ಸರ್ವರಿಗೂ ಸಂತಸವ ನೀಡಲಿ....!!

ಮತ್ತೆ ಬಂದಿದೆ ಎಲ್ಲರಿಗು ಮುದ ತರುವ ಈ ಉಗಾದಿ ..... on ಕನ್ನಡ ಬ್ಲಾಗರ್ಸ್
ನನ್ನ ಅಚ್ಚು ಮೆಚ್ಚಿನ ನಿಮಗೆಲ್ಲರಿಗೂ ಉಗಾದಿ ಹಬ್ಬದ ಶುಭಾಶಯಗಳು..., ಬೇವು ಬೆಲ್ಲದಂತೆ ಇನ್ನು ಮುಂದೆ ನಮ್ಮ ತನು-ಮನವುಗಳಿಗೆ ನವ ಚೇತನ ತರಲೆಂದು ಹಾರೈಸುವೆ..,

Monday, April 8, 2013

ಹೊಸಭಾವ

ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಅಂಧಕಾರವು ಮರೆಯಾಗಿ
ಅಲೆಅಲೆಯಾಗಿ ಬಿಡುತ್ತಿತ್ತು
ಚೈತ್ರ ಮಾಸದ ಸುವಾಸನೆ
ನೀರಿನ ಒಳ ಗರ್ಭದಿಂದ
ಮೇಲೇರಿತು ಸುಂದರವಾದ
ಅರಳಿದ ತಾವರೆ ಹೂ
ಪೊರೆ ಪೊರೆಯಾಗಿದ್ದ ನೀಲಾಗಸದಲ್ಲಿ
ರಂಗು ರಂಗಿನ ಹೊಂಬಣ್ಣದ
ಸೂರ್ಯನ ನವ ಕಿರಣಗಳು
ನನ್ನ ಮೈ ಸೋಕಿತು
ಮೆಲ್ಲನೆ ಮುತ್ತಿನಂತೆ
ಮಂಪರು ನಿದ್ದೆಯಲ್ಲಿರುವಾಗಲೇ
ನೆನಪಾಯಿತು ಇಂದು ಯುಗಾದಿ ..!!

ಎಲ್ಲೆಲ್ಲೂ ಚೈತ್ರದ ಹಸಿರು
ಏನು ಸೊಬಗು!
ಮೊಗ್ಗು ಹೂವಾಗಿ
ಹೂ ಹಣ್ಣಾಗುವ
ಸೋಜಿಗದ ಕಲೆ
ಅರಳಿದ ಮನವೊಂದು
ಹಾಡಿತು ಹೊಸರಾಗ
ಚೈತ್ರದಿಂದ ಪುಳಕಗೊಂಡು
ಹೊಳೆಯಿತು ಬಾಳಿಗೆ
ಹೊಸ ಭಾವ.

Thursday, April 4, 2013

ಮುಂಗಾರಿನ ಮಳೆ

ಮುಂಗಾರಿನ ಮಳೆ
-----------------
ಗುಡುಗಿಲ್ಲ , ಮಿಂಚಿಲ್ಲ......
ಆಗಸದ ತುಂಬಾ ಮುತ್ತಿರುವ
ಕಪ್ಪನೆಯ ಮೋಡಗಳಿಂದ
ಸದ್ದಿಲ್ಲದೆ ಸುರಿದ ಧೋ ಧೋ
ಮಳೆಗೆ ಮೈತೊಳೆದಳು
ಈ ಇಳೆ
ಅಳಿಸಿ ಹಾಕಿದಳು
ಎಲ್ಲಾ ಕಲ್ಮಷ ಕೊಳೆ..!

ಮುತ್ತಿನಾ ಹನಿಯಂತೆ
ಮುಸಲ ಧಾರೆ ಧಾರೆ
ವೈಶಾಖದ ಸುಡು ಬಿಸಿಲಿಗೆ
ಕಾದು ಕೆಂಪಾದ ನೆಲಕ್ಕೆ ಬಿದ್ದು
ದಾಹ ತೀರಿ ತಂಪುಂಡ ಧರಿತ್ರಿ
ಮುತ್ತಂತೆ ನಕ್ಕಳು
ಹಸಿರ ಹೂನಗೆ ಚೆಲ್ಲಿ !

ಬಿದ್ದ ಮುಂಗಾರಿನ ಮಳೆಗೆ
ಹದವಾಯಿತು ನೆಲ
ಹರ್ಷಗೊಂಡಿತು ರೈತ ಸಂಕುಲ
ಕಳೆಯಿತು ಮನದ ವ್ಯಾಕುಲ
ಹಳ್ಳ , ಕೊಳ್ಳ , ಕೆರೆಕಟ್ಟೆಗಳೆಲ್ಲಾ
ತುಂಬಿ ಹರಿಯಿತು ಕಲರವಿಸಿ

ಸುತ್ತಲೂ ಚೆಲ್ಲಿಹುದು ಚೆಲುವು
ಎತ್ತೆತ್ತ ನೋಡಿದರೂ ಕಾಣುವುದು ಒಲವು
ಶ್ರಾವಣದ ಸಂಭ್ರಮವೇ ತುಂಬಿದೆ
ಮುಂಗಾರಿನ ಮಳೆಯಲ್ಲಿ
ಭರವಸೆಯ ಮಳೆಬಿಲ್ಲು
ಮೂಡುವುದು ಮನದಲ್ಲಿ.

Wednesday, April 3, 2013

ಮಾಗಿಯ ಚಳಿಯಲ್ಲಿ

ಮಾಗಿಯ ಚಳಿಯಲ್ಲಿ
-------------------------
ಹಗಲೆಲ್ಲಾ ದಹಿದಹಿಸುವ
ಬಿಸಿಲಿನ ಬೇಗೆ
ರಾತ್ರಿ ಕರುಳು ಕತ್ತರಿಸುವ
ಚಳಿಯ ಅಲಗು
ಹೊರಗಿರುವ ಶೀತಲ ಮಾರುತದ
ಮೇಲೆ ನರ್ತಿಸುವ ಇಬ್ಬನಿ ಸೋನೆ
ಹಣ್ಣಾಗಿ ಹನಿಯಂತುದುರುವ ಹಸಿರು
ಕೊಂಬೆ ಕೊಂಬೆಗಳ ನಡುವೆ
ಸಿಕ್ಕಿಕೊಂಡ ಉಸಿರು
ಮಡುಗಟ್ಟಿ ನೀರು ಘನವಾಗಿ
ಬೀಳುವ ಹನಿಹನಿ ಹಿಮ

ಒಳಗರಳುವ ದಳವೂ ಮುದುರಿ ಮೊಗ್ಗಾಗಿ
ಎದ್ದ ಗೋಡೆಗಳೂ ಬಿದ್ದು ಬಯಲಾಗಿ
ಹಾಸಿದ ಹಾಸಿಗೆಯೂ ಚುಚ್ಚುವ ಮುಉಳ್ಳಾಗಿ
ಹೊದ್ದ ಹೊದಿಕೆಯೂ ತಣ್ಣನೆಯ ರಾಶಿಯಾಗಿ
ಈ ಮಾಗಿಯ ಚಳಿಯಲ್ಲಿ ಸಿಕ್ಕಿಕೊಂಡವರಿಗೆ
ಉಸಿರಾಡಲು ಬೆಚ್ಚನೆಯ ತಾಣವೆಲ್ಲಿ...?
ರಕ್ಷಣೆ ಎಲ್ಲಿ...?
ಅದೇ ಪ್ರಿಯತಮೆಯ ಒಡಲು
ಮಧುರ ಮಡಿಲು
ಬಿಸಿ ನೆತ್ತರ ಕಡಲು !
ಅಲೆಗಳೆದ್ದ ಮಧುರಾಧರಗಳಲ್ಲಿಳಿದು
ಕಾದ ಮೈ ಕಾವಲಿಯ ಮೇಲುರುಳಿ
ಕಣಿವೆ ಕುಲುಮೆಯಲರಳಿ
ಕಾದು ಕಡು ಕೆಂಪಾಗಿ ಹೊರಳಿ
ಕುಡಿಯೊಡೆದು ಸೊಂಪಾಗಿ ತೆವಳಿ
ಹದವಾದ ನೆಲದಲ್ಲಿ
ಹಚ್ಚನೆಯ ಹಸಿರಾಗಿ
ಚಿಮ್ಮಿ ಹೊಮ್ಮುವೆ
ಮಾಗಿಯ ಚಳಿಗೆ...!