ವರುಷ ಕಳೆದದ್ದು
ಗೊತ್ತಾಗಲೇ ಇಲ್ಲ
ನಿರರ್ಥಕವಾಗಿ ಕಳೆದದ್ದು
ಈಗ ಲಕ್ಷಕ್ಕೆ ಬಂತು
ದೇಹಕ್ಕಾಯಿತು ವಯಸ್ಸು
ಮನಸ್ಸಿನ್ನೂ ಎಳಸು
ಉತ್ಸವದಲ್ಲಿ ಪಾಲ್ಗೊಂಡ
ರಂಗು ರಂಗಿನ ಗಾಳಿಪಟಗಳ ಹಾರಾಟ
ಬಣ್ಣ ಬಣ್ಣದ ಕನಸಿನೊಡೆ
ಮನದ ತುಂಬ
ಇಂದು ಅರಿವಿಗೆ ಬಂತು
ಕೆಲಸಗಳು ನೂರೆಂಟು
ನಡು ನೀರಿನಲ್ಲಿ , ದಡ ದೂರದಲ್ಲಿ
ಹಾಡು ಇನ್ನೂ ಪಲ್ಲವಿ
ಬರೆಯಬೇಕಾಗಿದೆ ನುಡಿಗಳ
ನೂರು ಭಾವ ಬಿತ್ತಿ
ಮೂಡಿದೆ ಬರಿಯ ಹಂದರ
ತುಂಬಬೇಕಿದೆ ಅದರೊಳಗೆ ಜೀವನ
ಸೂರ್ಯ ರಶ್ಮಿಯ ಬಣ್ಣಗಳ
ಜೀವ ಜೀವಗಳ
ಎದೆಯ ಬಾಗಿಲ ತಟ್ಟಿ
ಸುರಿಸಬೇಕಿದೆ ಪ್ರೀತಿಯ
ಕ್ರಮಿಸಬೇಕಿದೆ ಮೈಲು ದೂರ
ದೃಷ್ಟಿ ನೆಟ್ಟಿದೆ ದೂರದಲಿ
ಹೆಜ್ಜೆ ದಣಿದಿದೆ ಸೋತು
ಇಂದು ಅರಿವಿಗೆ ಬಂತು
ಎಣ್ಣೆ ಹನಿದಿದೆ
ಮರಳು ಸೋರಿದೆ
ಹುಡುಕುತಿದೆ ಮನಸು
ಕಡಲ ದಂಡೆಯಲ್ಲೊಂದು
ತೈಲ ನಿಕ್ಷೇಪ...!
No comments:
Post a Comment