Tuesday, April 2, 2013

ಸಂಜೆ ಮಬ್ಬಿನಲಿ

ಸಂಜೆ ಮಬ್ಬಿನಲಿ
---------------
ಬದುಕಿನ ಹಂದರವ ನಿರ್ಮಿಸುತ್ತಲೇ
ಪರಕೀಯನಾಗಿಯೇ ಕರಗಿದ
ನನ್ನೀ ಬದುಕು.....
ನೆನಪುಗಳು ಸಾಯುವುದಿಲ್ಲ
ಭೂತಕಾಲದ ಘೋರಿ ಸೇರಿದ್ದರೂ
ಕುಳಿತುಕೊಂಡೇ ಇರುತ್ತವೆ
ಭೂತ ಪದರಿನಲಿ ಬೆಚ್ಚಗೆ

ಸಂಜೆ ಮಬ್ಬಿನಲಿ ಈಗ
ಹಿನ್ನೆಲೆಯ ಅಲೆಗಳು
ಮತ್ತೆ ಮತ್ತೆ ಹುಟ್ಟಿ ಅಳಿಯುತ್ತಾ
ಬಣ್ಣಗಳು ಕರಗಿ
ಸುಕ್ಕು ಮೂಡುವ ಕಾಲ!
ಸಾವಿನ ಹೊಸ್ತಿಲಲಿ
ಕೂತಿರುವ ನನಗೋ
ನಿರಂತರ ಪಯಣಕ್ಕಾಗಿ ತೆರೆದ
ಕೊನೆಯಿರದ ಇನ್ನಷ್ಟು ದಾರಿಗಳು

ಬದುಕಿನ ಮೆಟ್ಟಿಲಿನಲ್ಲಿ ಕುಳಿತು
ಎಣಿಸುತ್ತಿರುವೆ ಕಳೆದ ದಿನಗಳ
ಹಿಂದೆಲ್ಲಾ ಅದೆಂಥ ಕಾಲ!
ಪ್ರತಿ ವರ್ಷದ ಬೆಚ್ಚನೆಯ ಚಳಿಗಾಲ
ತುಂಬುವಸಂತದ ಹೊಂಗನಸು
ಗಾಳಿ ತುಂಬ ಹಕ್ಕಿಗಳ ಇಂಚರ
ಹಿತವಾದ ಸಂಜೆಗಳು!

ಎಲ್ಲಿ ಹೋಯಿತೋ?
ಕಾಲರಾಯ ಕಸಿದುಕೊಂಡ
ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ
ಈಗೇನುಳಿದಿದೆ...?
ಬರೀ , ಆ ನೆನಪಿನ ಪಳೆಯುಳಿಕೆ
ನಿತ್ಯ ಶಾಶ್ವತ!
ಹಂದರದ ತುಂಬ ತುಕ್ಕು ಹಿಡಿದ ಸರಪಳಿಗಳು
ಆಷಾಢದ ಗಾಳಿಯ ನಡುವೆ
ನಿಸರ್ಗದ ಕಣ್ಣು ಮುಚ್ಚಾಲೆ
ಹಸಿದ ಹೆಬ್ಬುಲಿಯಂತೆ
ವೈಶಾಖದ ರಣ ಬಿಸಿಲು
ಒಣಗಿ ಬತ್ತಿಹೋದ ಕಂಗಳಲ್ಲೀಗ
ಯಾವ ಸೂರ್ಯನೂ ಇಲ್ಲ!

No comments:

Post a Comment