Tuesday, April 2, 2013

ಕ್ಷಮಯಾ ಧರಿತ್ರಿ

ಕ್ಷಮಯಾ ಧರಿತ್ರಿ
----------------
ಕಂಡಿರಾ ನೀವು
ನಮ್ಮೂರ ಉದ್ಯಾನದಲಿ
ಅರಳಿ ತಲೆ ಎತ್ತಿನಿಂತ ಗಿಡವ........?
ವಸಂತ ಬಂತೆಂದರೆ
ಅದಕ್ಕೆ ಎಲ್ಲಿಲ್ಲದ ಸಂಭ್ರಮ!
ಚಿಗುರು ಚಿಗುರಿ, ಹಸಿರೊಡೆದು
ಮೈ ವಿಕಸಿಸಿ
ಕೊಂಬೆ ಕೊಂಬೆಗಳಲ್ಲೂ
ಹಣ್ಣು ತೂಗಿ
ತೊಯ್ದಾಡುತ್ತದೆ ಲಜ್ಜೆಯಿಂದ.

ನೆರಳಾರಿಸಿ ಬಂದವರು ಸುಮ್ಮನಿರದೇ
ಹಣ್ಣು ಕಿತ್ತು, ಹರಿದು ಮುಕ್ಕುತ್ತಾ
ಬಯಲಾಗಿಸುತ್ತಾ ಮರೆಯಾದಾಗ
ನನ್ನ ಮನದಲಿ
ಓ! ತಾಯಿ
ನಿನ್ನದೇ ನೆನಪು
ನೀ ಕೂಡಾ ಹಸಿರಾದೆ, ಬಸಿರಾದೆ
ಸೃಷ್ಟಿಸಿದೆ ಹೂಕಾಯಿಗಳ
ಅವು ಚಿಗುರಲೆಂದು ಬರಿದಾಗಿಸಿದೆ.

ಬಂದವರು ಕಿತ್ತು ತಿಂದರೂ
ನೀ ಸುಮ್ಮನಾದೆ
ನಿನ್ನನ್ನೇ ಮರೆತರು
ಆದರೂ,
ನಿನ್ನ ತನ ಮಾಯಲಿಲ್ಲ
ನಿನ್ನ ಕಡಿದಷ್ಟೂ ಚಿಗುರುತ್ತೀಯಾ
ಜೀವರಾಶಿಗೆ ಅಶ್ರಯ ನೀಡುತ್ತೀಯಾ
ಮನಕೆ ಆನಂದ ನೀಡುತ್ತೀಯಾ
ನೀನು ಸಾಮಾನ್ಯಳಲ್ಲ
ನೀನು ’ಕ್ಷಮಯಾ ಧರಿತ್ರಿ’ !!

No comments:

Post a Comment